ಒಂದು ವಿಷಾದದ ಸಂಗತಿಯನ್ನು ನಿಮಗೆ ಹೇಳಲೇಬೇಕು. ಇದು ನಡೆದಿರುವುದು ಸುಮಾರು ೧೫ ದಿನಗಳ ಹಿಂದೆ. ಪ್ರಮುಖ ಪತ್ರಿಕಾಸಂಸ್ಥೆಯೊಂದರ ಕ್ಯಾಂಟೀನ್‌ನಲ್ಲಿ ಸಂಭವಿಸಿದ ಅವಘಡವಿದು.
ಕುಡಿವ ನೀರಿಗೆ ಕೊಚ್ಚೆ ನೀರು ಮಿಶ್ರಣಗೊಂಡಿತು. ಬಹುಶಃ ಕುಡಿಯುವ ನೀರಿನ ಪೈಪು ಒಡೆದು, ಒಳಚರಂಡಿಯ ನೀರು ಪೈಪಿನೊಳಗೆ ನುಗ್ಗಿರಬಹುದು. ಅದೇ ನೀರು ಕ್ಯಾಂಟೀನ್‌ಗೂ ಸರಬರಾಜಾಯಿತು. ಇದನ್ನು ಅರಿಯದ ಪತ್ರಕರ್ತರು ಎಂದಿನಂತೆ ನೀರು, ಮಜ್ಜಿಗೆ ಕುಡಿದರು. ಕೆಲವೇ ಕ್ಷಣಗಳಲ್ಲಿ ಅನೇಕರು ಆಸ್ಪತ್ರೆ ಸೇರಿದರು. ಕಚೇರಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಕುಡಿವ ನೀರಿನಿಂದ ಈ ಸಮಸ್ಯೆ ಆಗಿಲ್ಲ ಎಂದು ತೋರಿಸಲು ತಾವೆ ಒಂದು ಲೋಟ ಮಜ್ಜಿಗೆ ಕುಡಿದರು. ಅವರೂ ಚಿಕಿತ್ಸೆ ಮೊರೆ ಹೋಗಬೇಕಾಯ್ತು.
ಹಿರಿಯ ಪತ್ರಕರ್ತರನೇಕರು ಆಸ್ಪತ್ರೆಗೆ ದಾಖಲಾಗಿ ಎರಡು ಮೂರು ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಯಿತು. ಮತ್ತೆ ಕೆಲವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದರು. ವಯಸ್ಸಾದಂತೆ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತ ಹೋಗುತ್ತದೆ. ಹೀಗಾಗಿ ಈ ಕೊಳಕು ನೀರು ಕುಡಿದು ಸಮಸ್ಯೆ ಅನುಭವಿಸಿದವರ ಪೈಕಿ ಬಹುತೇಕರು ಹಿರಿಯ ಪತ್ರಕರ್ತರು.
ಇವತ್ತಿನ ಕಾಲಮಾನದಲ್ಲಿ ಕುಡಿಯುವ ನೀರು ಶುದ್ಧವಾಗಿಲ್ಲದೇ ಹೋದರೆ ಬರುವ ಖಾಯಿಲೆಗಳು ಒಂದೊಂದಲ್ಲ. ಹೀಗಾಗಿ ಮನೆಗಳಲ್ಲಿ ಸಹ ಎಂಥದ್ದೇ ನೀರಾದರೂ ಶುದ್ಧೀಕರಿಸಿ ಕುಡಿಯಲಾಗುತ್ತದೆ. ಇದಕ್ಕಾಗಿಯೇ ಪ್ಯೂರ್ ಇಟ್, ಅಕ್ವಾಗಾರ್ಡ್ ತರಹದ ವ್ಯವಸ್ಥೆಗಳನ್ನು ಎಲ್ಲರೂ ಇಟ್ಟುಕೊಂಡಿರುತ್ತಾರೆ. ಆದರೆ ಪ್ರಮುಖ ಪತ್ರಿಕಾ ಸಂಸ್ಥೆಯ ಕ್ಯಾಂಟೀನ್‌ನಲ್ಲಿ ಇಂಥ ವ್ಯವಸ್ಥೆ ಇರಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾವುದೇ ಕ್ಯಾಂಟೀನ್‌ನಲ್ಲಿ ಹೀಗೆ ಶುದ್ಧೀಕರಿಸದ ನೀರನ್ನು ನೀಡುವುದೇ ಅಪರಾಧ. ಆದರೆ ಇಲ್ಲಿ ಅವಘಡ ಸಂಭವಿಸಿಹೋಗಿದೆ. ಇಂಥದ್ದು ಮತ್ತೆ ಮತ್ತೆ ನಡೆಯಬಾರದು.
ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಹೀಗೆ ಕಲುಷಿತ ನೀರು, ಆಹಾರ ಸೇವಿಸಿ ಮಕ್ಕಳು ಅಸ್ವಸ್ಥರಾಗುವ ಸುದ್ದಿಯನ್ನು ಇದೇ ಪತ್ರಕರ್ತರು ದೊಡ್ಡ ಅಕ್ಷರಗಳಲ್ಲಿ ಪತ್ರಿಕೆಗಳಲ್ಲಿ ಬರೆಯುತ್ತಾರೆ, ಬರೆಯಬೇಕಾಗುತ್ತದೆ. ಆದರೆ ಪತ್ರಕರ್ತರೇ ಇಂಥ ಸಂದರ್ಭಕ್ಕೆ ಸಿಲುಕಿದರೆ ಅದು ನಮ್ಮ ಪತ್ರಿಕೆಗಳಲ್ಲಿ ಸಿಂಗಲ್ ಕಾಲಂ ಸುದ್ದಿಯೂ ಆಗುವುದಿಲ್ಲ.
ಸದ್ಯಕ್ಕೆ ಯಾರ ಜೀವಕ್ಕೂ ಅಪಾಯವಾಗಿಲ್ಲ. ಇಂಥ ಘಟನೆ ಮರುಕಳಿಸದಿರಲಿ, ಎಲ್ಲರೂ ಬೇಗ ಪೂರ್ಣ ಗುಣಮುಖರಾಗಲಿ ಎಂದು ಆಶಿಸೋಣ.
发表评论