ಕನ್ನಡ ಪತ್ರಿಕಾರಂಗದ ಅಂಕಣಕಾರರನ್ನು ಕುರಿತು ಬರೆದಿದ್ದ ಆನಂದ್ ಪಾಟೀಲ್, ಮಹಿಳಾ ಅಂಕಣಕಾರ್ತಿಯರನ್ನೂ ನೆನಪಿಸಿಕೊಂಡು ಬರೆದಿದ್ದಾರೆ. ಹಾಗೆಯೇ ಅವರ ಮೊದಲ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಒಂದು ಚುಟುಕು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಅಂದ ಹಾಗೆ, ಆನಂದ್ ಪಾಟೀಲ್ ಮೂಲತಃ ಬೆಳಗಾವಿಯವರು. ಅರ್ಥಶಾಸ್ತ್ರ ಮತ್ತು ಸಮೂಹ ಮಾಧ್ಯಮ ವಿಷಯಗಳಲ್ಲಿ ಎರಡು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನೇರ ನೇಮಕಾತಿ ಮೂಲಕ ಸ್ಟೇಟ್ ಬ್ಯಾಂಕ್ ಇಂಡಿಯಾಗೆ ಅಧಿಕಾರಿಯಾಗಿ ಸೇರ್ಪಡೆ. ಸದ್ಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಸೇವೆ. ಮಾಧ್ಯಮ, ಹಿಂದೂಸ್ತಾನಿ ಸಂಗೀತ, ಚಿತ್ರಕಲೆ ಇವರ ಆಸಕ್ತಿಯ ವಿಷಯಗಳು. -ಸಂ
ಕನ್ನಡ ಪತ್ರಿಕೋದ್ಯಮದಲ್ಲಿ ಅಂಕಣಗಳನ್ನು ಕುರಿತು ಬರೆಯುವಾಗ ಮಹಿಳೆಯರು ಬರೆದ ಅಂಕಣಗಳ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಬೇಕು. ಪುರುಷರಿಗೆ ಹೋಲಿಸಿದರೆ ಅವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು.
ಕನ್ನಡದಲ್ಲಿ ಪ್ರಥಮ ಅಂಕಣಕಾರ್ತಿ ಬಹುಶಃ ಆರ್. ಕಲ್ಯಾಣಮ್ಮ ಅವರೇ ಇರಬಹುದು. ಅವರು ತಾವು ಸಂಪಾದಕಿಯಾಗಿದ್ದ ಸರಸ್ವತಿ ಮಾಸಪತ್ರಿಕೆಯಲ್ಲಿ ಪ್ರತೀ ತಿಂಗಳು ಅಂಕಣ ಬರೆಯುತ್ತಿದ್ದರು. ನಂಜನಗೂಡು ತಿರುಮಲಾಂಬ ಅವರು ಅಂಕಣ ಬರೆದರೇ ಎನ್ನುವುದು ನನಗೆ ತಿಳಿಯದು. ಶ್ಯಾಮಲಾಬಾಯಿ, ಸರಸ್ವತಿಬಾಯಿ ರಾಜವಾಡೆ, ಸರೋಜಿನಿ ಮಹಿಷಿ ಮೊದಲಾದ ಇನ್ನಿತರ ಹಿರಿಯ ಪತ್ರಕರ್ತೆಯರ ಅಂಕಣ ಬರಹದ ಬಗ್ಗೆಯೂ ಹೆಚ್ಚು ತಿಳಿಯಬೇಕಿದೆ.
ಅನುಪಮಾ ನಿರಂಜನ ಅವರು ಪ್ರಜಾವಾಣಿ ಸೇರಿ ಅನೇಕ ಪತ್ರಿಕೆಗಳಿಗೆ ಆರೋಗ್ಯ ಕುರಿತ ಪ್ರಶ್ನೋತ್ತರ ಅಂಕಣ ಬರೆದರು. ಉಷಾ ನವರತ್ನರಾಮ್ ಅವರು ತಾವು ಸಂಪಾದಕಿಯಾಗಿದ್ದ ಗೆಳತಿ ಮಾಸಪತ್ರಿಕೆಯಲ್ಲಿ ಅಂಕಣ, ಪ್ರಶ್ನೋತ್ತರ ಅಂಕಣ ಬರೆದರು.
ಹಿರಿಯ ಪತ್ರಕರ್ತೆ ವಿಜಯಾ ಅವರು ಉದಯವಾಣಿ, ರೂಪತಾರ ಪತ್ರಿಕೆಗಳಿಗೆ ಬಹಳ ಕಾಲ ಅಂಕಣ ಬರೆಯುತ್ತಿದ್ದರು. ಮಾತಿನಿಂದ ಲೇಖನಿಗೆ ಎಂಬುದು ಅವರ ಒಂದು ಅಂಕಣದ ಹೆಸರು. ಸಿನೆಮಾ ಕುರಿತ ಅಂಕಣಗಳೂ ಸೇರಿ ಹಲವಾರು ಅಂಕಣ ಬರೆದರು.
ತರಂಗದ ಸಂಪಾದಕಿ ಸಂಧ್ಯಾ ಪೈ ಪ್ರಿಯ ಓದುಗ ನಿರಂತರ ಬರೆಯುತ್ತಿದ್ದಾರೆ. ಉದಯವಾಣಿಯ ಸಂಪಾದಕಿಯಾಗಿದ್ದ ಆರ್. ಪೂರ್ಣಿಮಾ ಅರ್ಧ ಜಗತ್ತು, ಮಣ್ಣಿನ ಕಣ್ಣು, ಕಂಡದ್ದು ಕೇಳಿದ್ದು ಮತ್ತು ಎಂಥದು ಮಾರಾಯ್ತಿ! ಮುಂತಾದ ಅಂಕಣಗಳನ್ನು ಬರೆದರು. ಸಂಯುಕ್ತ ಕರ್ನಾಟಕದಲ್ಲಿ ಸ್ಥಾನಿಕ ಸಂಪಾದಕಿಯಾಗಿದ್ದ ಕೆ.ಎಚ್. ಸಾವಿತ್ರಿ ಜೀವನ್ಮುಖಿ ಮತ್ತು ಸಿನೆಮಾ ಅಂಕಣಗಳನ್ನು ಬರೆದರು. ಕನ್ನಡಪ್ರಭದಲ್ಲಿ ಯಶೋಧ ಅಂಕಣ ಬರೆದರು.
ವೈದೇಹಿ ಮೊದಲು ಲಂಕೇಶ್ ಪತ್ರಿಕೆಯಲ್ಲಿ, ಈಗ ಪ್ರಜಾವಾಣಿಯಲ್ಲಿ ಬರೆಯುತ್ತಿದ್ದಾರೆ. ಪ್ರತಿಭಾ ನಂದಕುಮಾರ್ ಕನ್ನಡಪ್ರಭದಲ್ಲಿ ಕೆಲವು ವರ್ಷ ಅನುದಿನದ ಅಂತರಗಂಗೆ ಎಂಬ ಹೆಸರಿನ ಅಂಕಣ ಬರೆದರು. ಉದಯವಾಣಿಯಲ್ಲಿ ಎಚ್.ಎಸ್. ಶ್ರೀಮತಿ ಗೌರಿದುಃಖ ಅಂಕಣ ಬರೆದರು. ಕೆ.ಎಂ. ವಿಜಯಲಕ್ಷ್ಮಿ ಕನ್ನಡದ ಮೊದಲ ಲೇಖಕಿಯರನ್ನು ಕುರಿತ ಅಂಕಣ ಬರೆದಿದ್ದಾರೆ. ನೇಮಿಚಂದ್ರ ಮತ್ತೆ ಉದಯವಾಣಿಯಲ್ಲಿ ಅಂಕಣ ಬರೆಯುತ್ತಿದ್ದಾರೆ. ಟೈಮ್ಸ್ ಕನ್ನಡದಲ್ಲಿ ಸಂಧ್ಯಾ ರೆಡ್ಡಿ ಕೆಲಕಾಲ ಬರೆದರು. ಪ್ರಜಾವಾಣಿಯಲ್ಲಿ ವಿಜಯಲಕ್ಷ್ಮಿ ಬಾಳೇಕುಂದ್ರಿ, ರೂಪ ಹಾಸನ ಅಂಕಣ ಬರೆದರು. ಈಗ ಪ್ರಾಧ್ಯಾಪಕಿ ಆರ್. ಇಂದಿರಾ ಒಳ್ಳೆಯ ಅಂಕಣ ಬರೆಯುತ್ತಿದ್ದಾರೆ.
ಸುಧಾ ಮೂರ್ತಿ ಮೊದಲು ವಿಜಯಕರ್ನಾಟಕದಲ್ಲಿ, ಈಗ ಕನ್ನಡ ಪ್ರಭದಲ್ಲಿ ಅಂಕಣ ಬರೆಯುತ್ತಿದ್ದಾರೆ. ಗುಲಾಬಿ ಬಿಳಿಮಲೆ, ಟೀನಾ ಕೆಲಕಾಲ ಅಂಕಣ ಬರೆದರು. ವೀಣಾ ಬನ್ನಂಜೆ ಅಂಕಣ ಕನ್ನಡಪ್ರಭದಲ್ಲಿ ಬರುತ್ತಿದೆ. ಸಿನೆಮಾದಲ್ಲಿ ಇನ್ನೂ ಹಲವು ಅಂಕಣಕಾರ್ತಿಯರಿದ್ದಾರೆ.
ಪ್ರಶ್ನೋತ್ತರ ಅಂಕಣಗಳಲ್ಲಿ ಹೇಮಲತಾ ಮಹಿಷಿ, ಗೀತಾ ಕೃಷ್ಣಮೂರ್ತಿ ಅವರ ಕಾನೂನು ಕುರಿತ ಅಂಕಣಗಳಿವೆ. ಪ್ರಭಾ ಮೂರ್ತಿ ಕೂಡ ಬರೆದಿದ್ದಾರೆ.
ಆರೋಗ್ಯ ಅಂಕಣಗಳಲ್ಲಿ ಪದ್ಮಿನಿ ಪ್ರಸಾದ್ ಅವರ ಲೈಂಗಿಕ ಆರೋಗ್ಯ ಕುರಿತ ಅಂಕಣವಿದೆ. ಶಮಂತಕಮಣಿ ನರೇಂದ್ರನ್, ಲೀಲಾವತಿ ದೇವರಾಜ್, ವಸುಂಧರಾ ಭೂಪತಿ, ಕೆ. ಪೂರ್ಣಿಮಾ ಭಟ್, ಕೆ. ಜಯಲಕ್ಷ್ಮಿ, ಹೇಮಾ ದಿವಾಕರ್ ಮುಂತಾದ ಅನೇಕ ವೈದ್ಯರು ಆರೋಗ್ಯ ಅಂಕಣಗಳನ್ನು ಬರೆದಿದ್ದಾರೆ.
ಈ ಪಟ್ಟಿಗೆ ಇನ್ನಷ್ಟು ಅಂಕಣಕಾರ್ತಿಯರು ಸೇರುವ ನಿರೀಕ್ಷೆಯಿದೆ.
****
ನನ್ನ ಬರಹಕ್ಕೆ ಹಳೆಯ ಅಂಕಣಗಳ ನೆನಪಿನ ಸುರಳಿಯನ್ನು ಬಿಚ್ಚುವ ಉದ್ದೇಶ ಇದೆಯೇ ಹೊರತು ಖಂಡಿತ ವಿಮರ್ಶೆ ಮಾಡುವ ಉದ್ದೇಶ ಇಲ್ಲ. ನಿಜ ಹೇಳಬೇಕೆಂದರೆ ಇದೊಂದು ಕನ್ನಡದ ಹಳೆಯ ಪತ್ರಿಕಾ ಅಂಕಣಗಳ ಅನೌಪಚಾರಿಕ ಪಟ್ಟಿ. ಹೊಸ ಅಂಕಣಗಳ ಬಗ್ಗೆ ಸಾಂದರ್ಭಿಕವಾಗಿ ಮಾತ್ರ ಹೇಳಲಾಗಿದೆ. ಈ ಪಟ್ಟಿ ನಿಜವಾಗಿ ಪರಿಪೂರ್ಣವಲ್ಲ. ಸಿಕ್ಕಷ್ಟು ದಾಖಲಿಸಿದ್ದೇನೆ. ನಿರುದ್ದೇಶವಾಗಿ ಕೆಲವೊಂದು ಹೆಸರುಗಳು ಬಿಟ್ಟುಹೋಗಿರಬಹುದು. ಅವುಗಳನ್ನು ಯಾರು ಬೇಕಾದರೂ ಸೇರಿಸಿ ಉಪಕರಿಸಬಹುದು. ಇದರ ಪ್ರಯೋಜನ ಎಲ್ಲರಿಗೆ ಆಗುತ್ತದೆ ಅಲ್ಲವೇ?
ಪ್ರೊ. ಜಿ.ವಿ. ಅವರು ಬಹುಕಾಲ ಪ್ರಜಾವಾಣಿಯಲ್ಲಿ ಬರೆದ ಭಾಷೆ ಕುರಿತ ಇಗೋ ಕನ್ನಡ ಒಂದು ಅತಿ ಉಪಯುಕ್ತ, ಅನನ್ಯ ಅಂಕಣವೆನ್ನುವುದರಲ್ಲಿ ಅನುಮಾನವೇ ಇಲ್ಲ. ಇತರ ಭಾಷೆಗಳಲ್ಲೂ ಇಂಥ ಅಂಕಣ ಅಪರೂಪ. ಕೆ.ವಿ. ನಾರಾಯಣ ಅವರ ಪದಸಂಪದ ಕೆಲಕಾಲ ಬಂದ ಅಂಕಣ. ಬಹಳ ಹಿಂದೆ, ಗುಲ್ವಾಡಿ ಅವರು ಸಂಪಾದಕರಾಗಿದ್ದಾಗ, ತರಂಗದಲ್ಲಿ ಹಂಪನಾ ಅವರು ಕೆಲಕಾಲ ಕನ್ನಡ ಪದಗಳ ಬಗ್ಗೆ ಅಂಕಣ ಬರೆದಿದ್ದರು.
ಪ್ರೊ ಎಸ್‌ಕೆಆರ್ ಅವರು ಸುಧಾ ವಾರಪತ್ರಿಕೆಯಲ್ಲಿ ಅಂಕಣ ಬರೆದರು. ಮತ್ತೆ ಇನ್ನಾವ ಪತ್ರಿಕೆಯಲ್ಲಿ ಬರೆದರೋ ಯಾರಾದರೂ ತಿಳಿಸಿದರೆ ಉಪಕಾರ ಆಗುತ್ತದೆ.
ವಿಜಯಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಅವರು ತಾವೂ ಹೆಚ್ಚು ಅಂಕಣಗಳನ್ನು ಬರೆದರು ಮತ್ತು ಇತರರಿಂದ ವೈವಿಧ್ಯಮಯವಾದ ಅಂಕಣಗಳನ್ನು ಬರೆಸಿದ ಬಗ್ಗೆ ಅನುಮಾನವಿಲ್ಲದೆ ನನ್ನ ಪ್ರಶಂಸೆ ಇದೆ. ಕನ್ನಡಪ್ರಭದಲ್ಲಿ ಆ ಒಳ್ಳೆಯ ಸಂಪ್ರದಾಯ ಮುಂದುವರಿಸಲಾಗಿದೆ. ನನ್ನ ಸಂಪ್ರಬಂಧದಲ್ಲಿ ಅದರ ಬಗ್ಗೆ ಚರ್ಚೆ ಮಾಡಿಯೇ ಮಾಡುತ್ತೇನೆ.
ಇದು ಅಂಕಣಗಳನ್ನು ಕುರಿತ ವಿಮರ್ಶಾ ಲೇಖನ ಅಲ್ಲ ಎಂದು ಹೇಳಿದರೂ, ಕ್ವಾಲಿಟಿ ಮತ್ತು ಕಮಿಟ್ ಮೆಂಟ್ ಮುಂತಾದ ಪದಗಳನ್ನು ಹೇಳುವ ಉದ್ದೇಶ ತಿಳಿಯುತ್ತಿಲ್ಲ. ನನ್ನ ಪ್ರಯತ್ನದ ಹಿಂದೆ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿ ಎಂಬ ಪ್ರಾಮಾಣಿಕ ಕಾಳಜಿಯಿದೆ.
ಮಹಿಳೆಯರ ಅಂಕಣಗಳ ಪಟ್ಟಿಗೆ ಗೌರಿ ಲಂಕೇಶ್ ಅವರು ರಾಜಕೀಯ ಸಾಮಾಜಿಕ ವಿಷಯಗಳ ಬಗ್ಗೆ ಬರೆಯುವ "ಕಂಡದ್ದು" ಅಂಕಣ, ವಿಜಯಕರ್ನಾಟಕದಲ್ಲಿ ನಟಿ ಮಾಳವಿಕಾ ಬರೆದ ಅಂಕಣ ಮತ್ತು ಕನ್ನಡಪ್ರಭದಲ್ಲಿ ನಿರೂಪಕಿ ಅಪರ್ಣಾ ಬರೆದ ಅಂಕಣ- ಇವುಗಳನ್ನು ಸೇರಿಸಬೇಕು.
ಇನ್ನು ಕನ್ನಡದಲ್ಲಿ ವಾರಭವಿಷ್ಯ ಹೇಳುವ ಅಂಕಣಗಳೇ ಬಹಳಷ್ಟಿವೆ. ಕೆಲವು ಪತ್ರಿಕೆಗಳಲ್ಲಿ ದಶಕಗಳಿಂದ ಬರೆಯುವವರಿದ್ದಾರೆ.
ವಿಜ್ಞಾನ- ತಂತ್ರಜ್ಞಾನ ಕುರಿತ ಅಂಕಣಗಳನ್ನು ಕೊಳ್ಳೇಗಾಲ ಶರ್ಮ, ಕೈವಾರ ಗೋಪಿನಾಥ್, ಹಾಲ್ದೊಡ್ಟೇರಿ ಸುಧೀಂದ್ರ, ಟಿ.ಆರ್. ಅನಂತರಾಮು, ಅಶೋಕ್ ಕುಮಾರ್ ಮೊದಲಾದವರು ಬರೆಯುತ್ತಿದ್ದಾರೆ.
发表评论