ಬದುಕು ಜಟಕಾ ಬಂಡಿಯ ಜಡ್ಜ್ ಸಾಹೇಬರಾದ ಶ್ರೀಮತಿ ಮಾಳವಿಕಾ ಅವಿನಾಶ್ ವಾಕ್ ಔಟ್ ಮಾಡಿದಷ್ಟೇ ವೇಗವಾಗಿ ಮತ್ತೆ ವಾಪಾಸು ಬಂದಿದ್ದಾರೆ. ಅಲ್ಲಿಗೆ ಅವರು ಜಗಳ ಮಾಡಿಕೊಂಡು ಒದ್ದಾಡುತ್ತಿರುವ ಕರ್ನಾಟಕದ ಜನರನ್ನು ಕೈಬಿಡಲಿಲ್ಲ ಎಂದಾಯಿತು. ಅವರದು ಮಾತೃಹೃದಯ, ಹೀಗಾಗಿ ಕಾರ್ಯಕ್ರಮ ನಡೆಸೋದಿಲ್ಲ ಎಂದು ಹೇಳಿದ ಮರುದಿನವೇ ನಿರ್ಧಾರ ಬದಲಿಸಿ ಬಂದು ತಮ್ಮ ಅಸಾಮಾನ್ಯ ಜನಪರ ಕಾಳಜಿಯನ್ನು ಮರೆದಿದ್ದಾರೆ. ಇನ್ನೇನು ಆಮರಣಾಂತ ಉಪವಾಸ ಸತ್ಯಾಗ್ರಹವನ್ನೇ ಹೂಡಬಹುದಾಗಿದ್ದ ತಮ್ಮ ಭಕ್ತವೃಂದವನ್ನು ಕಾಪಾಡಿದ್ದಾರೆ. ಅವರ ಮನೋಭಿಲಾಶೆಯನ್ನು ಈಡೇರಿಸಿದ್ದಾರೆ. ಅವರಿಗೆ ದೇವರು ಸಕಲ ಸನ್ಮಂಗಳವನ್ನೂ ಉಂಟು ಮಾಡಲಿ.

ಹೇಗೂ ಮಾಳವಿಕಾ ವಾಪಾಸು ಬಂದಿದ್ದಾರೆ. ನಿನ್ನೆ ಎಪಿಸೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಅವರು ಕಿತ್ತಾಡುತ್ತಿದ್ದ ಗಂಡ-ಹೆಂಡಿರನ್ನು ಒಂದು ಮಾಡಿ ಕಳುಹಿಸುವ ಮಹತ್ಕಾರ್ಯ ಮಾಡಿದ್ದಾರೆ. ನಿನ್ನೆ ಕಹಿ ಅನುಭವವಾಗಿತ್ತು, ಇವತ್ತು ಮನಸ್ಸಿಗೆ ಸಮಾಧಾನವಾಗುವ ಸಿಹಿ ಘಟನೆ ನಡೆದಿದೆ ಎಂದು ಅವರು ರೋಮಾಂಚಿತರಾಗಿದ್ದಾರೆ. ಜಟಕಾ ಬಂಡಿ ಇನ್ನಷ್ಟು ವೇಗವಾಗಿ ಮುಂದೆ ಸಾಗಲಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ಬಡಜನರಿಗೆ ಅನುಕೂಲವಾಗುವಂತೆ ಮಾಡಲು ಒಂದಷ್ಟು ಉದ್ರಿ ಸಲಹೆಗಳನ್ನು ಕೊಡೋಣ ಅನ್ನುವ ಆಲೋಚನೆ ನಮ್ಮದು. ಕೊಟ್ಟ ಸಲಹೆಗಳನ್ನು ತೆಗೆದುಕೊಳ್ಳೋದು ಬಿಡೋದು ಅವರಿಗೆ ಬಿಟ್ಟ ವಿಚಾರ. ಸಲಹೆಗಳು ಇಂತಿವೆ.

೧. ಜಟಕಾ ಬಂಡಿಯಲ್ಲಿ ಬಂದು ಕೂರುವ ಜನ ಸಂಸ್ಕಾರವಿಲ್ಲದವರು. ಹೀಗಾಗಿ ಹೊಡೆದಾಡುತ್ತಾರೆ, ಅದೂ ಚಪ್ ಚಪ್ಪಲಿಯಲ್ಲೇ ಕಾದಾಡುತ್ತಾರೆ. ಹೀಗಾಗಿ ಗಲಭೆ ನಿಯಂತ್ರಿಸಲು ಒಂದು ರ‍್ಯಾಪಿಡ್ ಆಕ್ಷನ್ ಫೋರ್ಸ್‌ನ ತುಕಡಿಯನ್ನು ಪರ‍್ಮನೆಂಟಾಗಿ ಶೂಟಿಂಗ್ ಸ್ಥಳದಲ್ಲಿ ನಿಯೋಜಿಸುವುದು ಒಳ್ಳೆಯದು. ಇಲ್ಲಿ ಹೊಡೆದಾಡುವವರು ಮಹಿಳೆಯರೂ ಆಗಿರುವುದರಿಂದ ಮಹಿಳಾ ಪೊಲೀಸರ ಒಂದು ತಂಡವನ್ನೂ ಸಹ ಇಟ್ಟುಕೊಳ್ಳುವುದು ಒಳ್ಳೆಯದು. ಸಂಭವನೀಯ ಗಲಭೆ ತಪ್ಪಿಸಲು ಪೊಲೀಸರು ಅಶ್ರುವಾಯು, ಮದ್ದುಗುಂಡು ಸೇರಿದಂತೆ ಎಲ್ಲ ಶಸ್ತ್ರಾಸ್ತ್ರಗಳಿಂದ ಸನ್ನದ್ಧರಾಗಿರುವುದು ಒಳ್ಳೆಯದು. ಹೀಗೆ ಶೂಟಿಂಗ್ ಸ್ಥಳದಲ್ಲೇ ಪೊಲೀಸರನ್ನು ಇಟ್ಟುಕೊಳ್ಳುವುದರಿಂದ ಪದೇ ಪದೇ ಪೊಲೀಸರಿಗೆ ಫೋನ್ ಮಾಡಿ ಕರೆಸುವ ತಾಪತ್ರಯ ತಪ್ಪುತ್ತದೆ.

. ಜಟಕಾ ಬಂಡಿಯಲ್ಲಿ ಜನರು ಆವೇಶಕ್ಕೆ ಬಿದ್ದು ಪರಸ್ಪರ ಹಲ್ಲೆ ಮಾಡಿಕೊಳ್ಳುವ, ಕೊಲೆ ಮಾಡಿಕೊಳ್ಳುವ ಸಾಧ್ಯತೆಗಳಿರುವುದರಿಂದ ಗಾಯಾಳುಗಳಿಗೆ ಅಗತ್ಯ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ಒಂದು ಮೊಬೈಲ್ ಆಸ್ಪತ್ರೆಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಒಬ್ಬ ವೈದ್ಯಾಧಿಕಾರಿ, ಮತ್ತೊಬ್ಬ ಫಿಜಿಷಿಯನ್, ಇನ್ನೊಬ್ಬ ಆರ್ಥೋಪೆಡಿಷಿನ್ ಜತೆಗೆ ಒಂದಷ್ಟು ಜನ ನರ್ಸುಗಳನ್ನು ಖಾಯಂ ಆಗಿ ನೇಮಕ ಮಾಡಿಕೊಳ್ಳುವುದು ಅಪೇಕ್ಷಿತ. ಸ್ಥಳದಲ್ಲೇ ಎಕ್ಸ್‌ರೇ, ಸಿಟಿ ಸ್ಕಾನ್ ಥರಹದ ಸೌಲಭ್ಯಗಳಿದ್ದರೆ ಇನ್ನೂ ಒಳ್ಳೆಯದು.

೩. ಕೌಟುಂಬಿಕ ಕೋರ್ಟುಗಳು, ಮಹಿಳಾ ಸಹಾಯವಾಣಿಗಳಲ್ಲಿ ಸಾವಿರಾರು ಕೇಸುಗಳು ಪೆಂಡಿಂಗಾಗಿವೆ. ಹೀಗೆ ಬಾಕಿ ಉಳಿದ ಕೇಸುಗಳನ್ನು ಜಟಕಾ ಬಂಡಿಯ ಕೋರ್ಟಿಗೆ ವರ್ಗಾಯಿಸಲು ಕೋರಿ ಸರ್ಕಾರಕ್ಕೆ ಮತ್ತು ರಾಜ್ಯ ಮುಖ್ಯ ನ್ಯಾಯಾಧೀಶರಿಗೆ ಒಂದು ಅರ್ಜಿ ಹಾಕಿ, ಕೇಸುಗಳನ್ನು ಪಡೆದು ಬಗೆಹರಿಸುವ ಕಡೆ ಯೋಚನೆ ಮಾಡಬಹುದು.

. ಜಟಕಾ ಬಂಡಿಯೂ ಒಂದು ಬಗೆಯ ಕೋರ್ಟ್ ಸ್ವರೂಪದಲ್ಲಿರುವುದರಿಂದ ಇದಕ್ಕೆ ಕಾನೂನು ಮಾನ್ಯತೆಯನ್ನು ದಕ್ಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸುವುದು ಒಳ್ಳೆಯದು. ಶಿಕ್ಷಣ ಕ್ಷೇತ್ರದಲ್ಲಿ ಈಗ ಖಾಸಗಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗುತ್ತಿರುವ ಹಾಗೆ ನ್ಯಾಯಾಂಗ ಕ್ಷೇತ್ರದಲ್ಲಿ ಖಾಸಗಿ ಕೋರ್ಟುಗಳು. ಹೇಗಿದೆ ಐಡಿಯಾ? ಹಾಗೆಯೇ ಜಟಕಾ ಬಂಡಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಬರುವವರಿಗೆ ತಮ್ಮ ಪರವಾಗಿ ವಕಾಲತ್ತು ವಹಿಸಲು ವಕೀಲರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಒದಗಿಸುವುದು ಸೂಕ್ತ.

. ಜಟಕಾ ಬಂಡಿಯ ಜಡ್ಜು ಮಾಳವಿಕಾ ಅವರ ಗೌರವವನ್ನು ಹೆಚ್ಚಿಸುವ ಸಲುವಾಗಿ ಅವರಿಗೆ ಹೊಸಬಗೆಯ ಡ್ರೆಸ್ ನೀಡುವುದು ಒಳ್ಳೆಯದು. ಜಡ್ಜುಗಳು ಧರಿಸುವ ನಿಲುವಂಗಿ ಅಥವಾ ಧರ್ಮಾಧಿಕಾರಿಗಳು ಬಳಸುವ ಉಡುಗೆ ಸೂಕ್ತವಾಗಬಹುದು. ಜಟಕಾ ಬಂಡಿ ಓಡಿಸುವವರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬಹುದು.

೬. ಜಟಕಾ ಬಂಡಿಯಲ್ಲಿ ಆಗಾಗ ಮಾರಾಮಾರಿ ನಡೆಯುವ ಸಾಧ್ಯತೆಗಳಿರುವುದರಿಂದ ಮಾಳವಿಕಾ ವಾಕ್ ಔಟ್ ಮಾಡುವ ಬಗೆಬಗೆಯ ದೃಶ್ಯಗಳನ್ನು ಮೊದಲೇ ಚಿತ್ರೀಕರಿಸಿಕೊಂಡು ಲೈಬ್ರರಿಯಲ್ಲಿಟ್ಟುಕೊಂಡರೆ ಅದನ್ನು ಬೇಕಾದಾಗಲೆಲ್ಲ ಬಳಸಬಹುದು.

೭. ಜಟಕಾ ಬಂಡಿಯಲ್ಲಿ ಹಂತಹಂತವಾಗಿ ಸಿವಿಲ್ ವ್ಯಾಜ್ಯಗಳನ್ನೂ ಬಗೆಹರಿಸಲು ಯತ್ನಿಸಬಹುದು. ಈಗ ಈ ಕೆಲಸವನ್ನು ಹಾಲಿ-ಮಾಜಿ ಭೂಗತ ದೊರೆಗಳು, ಕಾರ್ಪೊರೇಟರ್‌ಗಳು, ಹಾಲಿ-ಮಾಜಿ ಪೊಲೀಸ್ ಅಧಿಕಾರಿಗಳು ಮಾಡುತ್ತಿದ್ದಾರೆ. ಜಟಕಾ ಬಂಡಿ ಈ ಕೆಲಸವನ್ನು ಕೈಗೆತ್ತಿಕೊಂಡರೆ ಇವರೆಲ್ಲರ ಕೆಲಸ ಸುಲಭವಾಗುತ್ತದೆ.

. ಹಿಂದೆಲ್ಲಾ ಕೋರ್ಟುಗಳಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಪ್ರಕರಣಗಳು ನಡೆದಿವೆ. ಜಟಕಾ ಬಂಡಿಯಲ್ಲಿ ಏನೇನೋ ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಡ್ಜು ಸಾಹೇಬರಿಗೆ ಸಶಸ್ತ್ರ ಅಂಗರಕ್ಷಕರನ್ನು ಒದಗಿಸುವುದು ಸೂಕ್ತ.

ಇನ್ನೂ ಸಾಕಷ್ಟು ಸಲಹೆಗಳನ್ನು ಕೊಡಬಹುದು. ಆದರೆ ನಮ್ಮ ಓದುಗರು ಜಾಣರು. ಅವರೂ ಸಹ ಇನ್ನೊಂದಿಷ್ಟು ಉದ್ರಿ ಸಲಹೆಗಳನ್ನು ಕೊಡಬಲ್ಲವರಾದ್ದರಿಂದ ಇಲ್ಲಿಗೆ ನಿಲ್ಲಿಸಿದ್ದೇವೆ.
0 komentar

Blog Archive