ಪ್ರಾಣಿಬಲಿ ಕುರಿತ ಚರ್ಚೆ ಮುಂದುವರೆದಿದೆ. ಈಗ ಅಖಾಡಕ್ಕೆ ಇಳಿದವರು ಸಂಡೆ ಇಂಡಿಯನ್ ಪತ್ರಿಕೆಯ ವರದಿಗಾರ, ಪ್ರತಿಭಾವಂತ ಲೇಖಕ ಹರ್ಷ ಕುಮಾರ್ ಕುಗ್ವೆ. ಪ್ರಾಣಿ ಬಲಿಯೂ ಸಹ ಗ್ರಾಮೀಣ ಪ್ರದೇಶದಲ್ಲಿ ಹೇಗೆ ಸಂಸ್ಕೃತಿಯ ಭಾಗವೇ ಆಗಿದೆ ಎಂಬುದನ್ನು ಅವರು ಇಲ್ಲಿ ವಿವರಿಸಿದ್ದಾರೆ. ಪ್ರಾಣಿ ಬಲಿ ವಿರೋಧಿ ಚಿಂತನೆಯಲ್ಲಿ ನಿರ್ದಿಷ್ಟ ರಾಜಕಾರಣ ಇರುವುದನ್ನು ಗುರುತಿಸಿದ್ದಾರೆ. ಚರ್ಚೆ ಮುಂದುವರೆಯುತ್ತದೆ. -ಸಂಪಾದಕೀಯ
ಮೊದಲನೆಯದಾಗಿ ಇಲ್ಲಿ ಯಾವುದನ್ನು ಅರುಣ್, ರೂಪಾ ಹಾಸನ ಅವರು ಪ್ರಾಣಿ ಬಲಿ ಎಂದು ಕರೆದಿದ್ದಾರೋ ಅದನ್ನು ನಾನು ಪ್ರಾಣಿ ಬಲಿ ಎಂದು ಕರೆಯುವುದಿಲ್ಲ. ಯಾಕೆಂದರೆ ಅದನ್ನು ಹಾಗೆ ಕರೆಯುವ ಹಿಂದೆ ಒಂದು ನಿರ್ದಿಷ್ಟ ರಾಜಕೀಯ ಹಾಗೂ ಮನಸ್ಥಿತಿ ಇದೆ ಎಂದು ನನ್ನ ಸ್ಪಷ್ಟ ಅಭಿಪ್ರಾಯ. ಹಾಗಾಗಿ ಈ ಆಚರಣೆಯನ್ನು ನಾನು ಕೋಳಿ ಕುರಿ ಕಡಿಯೋದು ಎಂದು ಕರೆಯುತ್ತೇನೆ. ನಮ್ಮ ಊರಿನಲ್ಲಿ ಹಾಗೂ ನಾನು ಕಂಡಿರುವ ಹಲವಾರು ಹಳ್ಳಿಗಳಲ್ಲಿ ಅದನ್ನು ಎಲ್ಲರೂ ಕರೆಯುವುದೇ ಹಾಗೆ. ದೇವರ ಹೆಸರಲ್ಲಿ ಕುರಿ ಕೋಳಿಗಳನ್ನು ಬಲಿಕೊಡುತ್ತಾರಾದರೂ ಯಾರೂ ಹಾಗೆ ಕರೆಯುವುದಿಲ್ಲ.
ನಮ್ಮ ಊರಲ್ಲಿ ಸುಮಾರು ಹಬ್ಬಗಳಲ್ಲಿ ಹಾಗೂ ಜಾತ್ರೆಗಳಲ್ಲಿ ಕೋಳಿಕುರಿ ಕಡಿಯುವ ಸಂಪ್ರದಾಯ ಇದೆ. ಪ್ರತಿ ವರ್ಷ ಚೌಡಿ ಹಬ್ಬ ಅಂತ ಆಚರಿಸುತ್ತೇವೆ. ಆ ದಿನ ತಪ್ಪದೇ ಊರಿನ ಪ್ರತಿ ಮನೆಯವರೂ (ನಮ್ಮೂರಲ್ಲಿರುವ ೫೦೦ ಮನೆಗಳಲ್ಲಿ ಒಂದೈವತ್ತು ಮನೆಗಳಲ್ಲಿ ಮಾತ್ರ ಮಾಂಸಾಹಾರ ಮಾಡುವುದಿಲ್ಲ. ಆ ಮನೆಗಳವರು ಹೊರತುಪಡಿಸಿ) ಊರಿನ ಹೊರವಲಯದಲ್ಲಿರುವ ಚೌಡಿಬನಕ್ಕೆ ಕೋಳಿಗಳನ್ನು ತರುತ್ತಾರೆ. ಇಡೀ ಊರಿನ ಜನರ ಚಂದಾ (ಅದಕ್ಕೆ ವರಾಡ ಅಂತಾರೆ) ಎತ್ತಿ ೨-೩ ಕುರಿಗಳನ್ನು ತಂದಿರುತ್ತಾರೆ. ಆ ಚೌಡಿ ಬನದಲ್ಲಿರುವ ಚೌಡಿಗೆ ದಾಸಯ್ಯ ಎನ್ನುವವರು ಪೂಜೆ ನಡೆಸಿದ ಕೂಡಲೇ ಒಬ್ಬ ನಿರ್ದಿಷ್ಟ ವ್ಯಕ್ತಿ ಅಲ್ಲಿದ್ದ ಕುರಿಗಳನ್ನು ಕಡಿಯುತ್ತಾರೆ. ಆ ಕೂಡಲೇ ಎಲ್ಲರೂ ತಮ್ಮ ತಮ್ಮ ಕೋಳಿಗಳನ್ನು ಕುಯ್ದು, ತೆಂಗಿನಕಾಯಿ ಕಾಯಿ ಒಡೆದುಕೊಂಡು ಮನೆಗೆ ಹೋಗುತ್ತಾರೆ.
ಇದು ನೂರಾರು ವರ್ಷಗಳಿಂದ ನಡೆದು ಬಂದ ಆಚರಣೆ. ಈಗ ಕೆಲವರ್ಷಗಳಿಂದ ಬಿಟ್ಟರೆ ಚಿಕ್ಕಂದಿನಿಂದಲೂ ಈ ಆಚರಣೆಯಲ್ಲಿ ನಾನು ಭಾಗಿಯಾಗುತ್ತಲೇ ಬಂದಿದ್ದೇನೆ. ಪೇಪರುಗಳಲ್ಲಿ, ಟಿವಿಗಳಲ್ಲಿ ಇಂತಹ ಆಚರಣೆಯ ಕುರಿತು ಭೀಕರವಾಗಿ ಚಿತ್ರಣವಾದಾಗಲೆಲ್ಲಾ ಈ ಕುರಿತು ನನ್ನೊಳಗೇ ಜಿಜ್ಞಾಸೆ ನಡೆದಿದೆ. ಒಂದರೆ ಕ್ಷಣ ಈ ಸಂಪ್ರದಾಯದ ಆಚರಣೆಯ ಸಂದರ್ಭದಲ್ಲಿ ನಮ್ಮ ಊರಿನ ಜನರ ಸಂಭ್ರಮ ಸಡಗರಗಳು ಮನಸ್ಸಿನಲ್ಲಿ ಬಂದರೆ ಇನ್ನೊಂದು ಕ್ಷಣ ಅದನ್ನು ಮಾಧ್ಯಮಗಳು ಭೀಕರವಾಗಿ, ಅಮಾನವೀಯವಾಗಿ ಚಿತ್ರಿಸುವ ಮನಸ್ಥಿತಿಯ ಕುರಿತು ಯೋಚಿಸುತ್ತೇನೆ.
ಆದರೆ ಸೋಕಾಲ್ಡ್ ನಾಗರಿಕ ಸಮಾಜದ ಕೆಲವೇ ಮಂದಿ ಈ ಆಚರಣೆಯನ್ನು ಪರಿಭಾವಿಸುವಂತೆ ಇದು ಅಮಾನವೀಯ ಎಂತಲೋ, ಭೀಭತ್ಸ ಎಂತಲೋ ನನಗೆ ಅನ್ನಿಸಿಯೇ ಇಲ್ಲ. ಅನ್ನಿಸುವುದೂ ಇಲ್ಲ. ಇದು ನಮ್ಮ ಊರಿನ ಜನರು ಆಚರಿಸುವ ಹಬ್ಬದ ಸಡಗರದ ಒಂದು ಭಾಗವಷ್ಟೇ ಆಗಿ ತೋರಿದೆ ನನಗೆ. ನನ್ನ ಮಾತುಗಳು ಅನೇಕರಿಗೆ ಕ್ರೂರವೆನ್ನಿಸಲೂ ಕಾರಣವಿಲ್ಲದಿಲ್ಲ. ಆದರೆ ರೂಪಾ ಹಾಸನ ಅವರ ವಾದದಲ್ಲಿ ನನಗೆ ಅರ್ಥವಾಗದಿರುವುದೇನೆಂದರೆ ಅವರು ಕುರಿ ಕೋಳಿ ಮೀನುಗಳನ್ನು ಅಂಗಡಿಗಳಲ್ಲಿ ಕಡಿಯುವದಕ್ಕೇನೂ ವಿರೋಧ ವ್ಯಕ್ತಪಡಿಸಿಲ್ಲ. ಅದು ಅವರಿಗೆ ಶುದ್ಧವಾದ ವಿಧಾನವಾಗಿ ತೋರುತ್ತದೆ. ಆದರೆ ಹೀಗೆ ಕುರಿಕೋಳಿ ಕಡಿಯುವುದು ಸಾಮುದಾಯಿಕ ನೆಲೆಯಲ್ಲಿ ಸಾಮೂಹಿಕವಾಗಿ ನಡೆದಾಗ ಮಾತ್ರ ಅದು ಮಾನವೀಯವಾಗಿ ತೋರುತ್ತದೆ. ಏನಿದರ ಅರ್ಥ? ಹೊಟೆಲ್‌ನಲ್ಲಿ ಮಾಂಸ ಎಷ್ಟಾದರೂ ತಿನ್ನಬಹುದು ಆದರೆ ಹಬ್ಬಹರಿದಿನಗಳಲ್ಲಿ ಸಂಭ್ರಮದಿಂದ ಜನರು ಮಾಂಸಾಹಾರವನ್ನು ತಿನ್ನುವುದು ವರ್ಜ್ಯ. ಇದೆಂತಹ ಇಬ್ಬಂದಿತನ?
ನಮ್ಮ ಸಂವಿಧಾನ ಹಾಗೂ ಅಂಬೇಡ್ಕರ್‌ರನ್ನು ರೂಪಾ ಹಾಸನ ಅವರು ತಮ್ಮ ವಾದಕ್ಕೆ ತಂದಿದ್ದಾರೆ. ನನಗೆ ತಿಳಿದಿರುವಂತೆ ಸಂವಿಧಾನದ ೫೧ಎ ಕಲಮು ಮೂಲಭೂತ ಕರ್ತವ್ಯಗಳ ಕುರಿತು ಮಾತನಾಡುತ್ತದೆಯೇ ಹೊರತು ಪ್ರಾಣಿಬಲಿಯ ಬಗ್ಗೆ ಅಲ್ಲ. ೫೨ಎ (ಎಫ್) ಪರಿಚ್ಛೇದ ದೇಶದ ಶ್ರೀಮಂತ ಸಂಸ್ಕೃತಿಯನ್ನು ಉಳಿಸುವ ಕುರಿತು ಮಾತನಾಡುತ್ತದೆ. ನನಗೆ ನಮ್ಮೂರಿನ ಚೌಡಿ ಹಬ್ಬವನ್ನು ಹೊರತುಪಡಿಸಿದ ದೇಶದ ಸಂಸ್ಕೃತಿ ಯಾವುದಾದರೂ ಇದೆಯೇ ಎಂದು ನೋಡಿದರೆ ಅದು ಪರಕೀಯ ಸಂಸ್ಕೃತಿಯಾಗಿ ಕಾಣುತ್ತದೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಇದನ್ನು ವಿರೋಧಿಸಿದ್ದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಅವರು ನಂತರದಲ್ಲಿ ಆಯ್ಕೆ ಮಾಡಿಕೊಂಡ ಬೌದ್ಧ ಧರ್ಮದ ಮೂಲ ಪುರುಷ ಗೌತಮ ಬುದ್ಧ ಗೋವಧೆಯನ್ನು ನಿಷೇಧಿಸಲು ನಿರ್ದಿಷ್ಠ ಚಾರಿತ್ರಿಕ ಕಾರಣವಿತ್ತು. ಅಂದು ಗೋವಧೆಯು ವೈದಿಕ ಧರ್ಮದ ಪ್ರಮುಖ ಆಚರಣೆಯಾಗಿದ್ದರಿಂದ ಕೃಷಿಯಲ್ಲಿ ಬಂದಂತಹ ಬಿಕ್ಕಟ್ಟನ್ನು ಪರಿಹರಿಸಲು ಬೌದ್ಧಧರ್ಮ ಹಾಗೆ ನಿಯಮವನ್ನು ಜಾರಿಗೊಳಿಸಿತ್ತು. ಈ ಕಾರಣದಿಂದಲೇ ಅದು ಕೃಷಿಕ ಸಮುದಾಯಕ್ಕೆ ಹತ್ತಿರವಾಯಿತು. ತದನಂತರದಲ್ಲಿ ಅದರ ಜನಪ್ರಿಯತೆಯನ್ನು ತಪ್ಪಿಸಿ ತನ್ನ ಅಸ್ತಿತ್ವವನ್ನು ಕಾಪಾಡಲು ವೈದಿಕ ಧರ್ಮ ಸಂಪೂರ್ಣ ಮಾಂಸಾಹಾರವನ್ನು ಪ್ರತಿಪಾದಿಸಿತ್ತು. ಇದು ದಾಮೋದರ ಧರ್ಮಾನಂದ ಕೋಸಾಂಬಿ ಹಾಗೂ ಆರ್.ಎಸ್.ಶರ್ಮರಂತ ಪ್ರಮುಖ ಚರಿತ್ರೆಕಾರರ ಆಖ್ಯಾನ.
ಅರುಣ್ ಜೋಳದ ಕೂಡ್ಲಿಗಿಯವರು ಸಾಂಸ್ಕೃತಿಕ ಚರ್ಚೆಯ ಹಿನ್ನೆಲೆಯಲ್ಲಿ ಮಾತನಾಡಿದ್ದಾರಾದರೂ ಅವರ ಮನಸ್ಸಿನಲ್ಲಿಯೂ ಹೀಗೆ ಪ್ರಾಣಿಗಳನ್ನು ಕಡಿಯುವುದು ಸರಿಯಲ್ಲ ಎನ್ನುವ ಮನಸ್ಥಿತಿಯಿದೆ. ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ನನ್ನ ಅಭಿಪ್ರಾಯಗಳನ್ನು ಇನ್ನೊಂದು ರೀತಿ ವಿವರಿಸಲು ಇಚ್ಚಿಸುತ್ತೇನೆ. ಇದು ಬಹಳ ಜನರಿಗೆ ತಲೆಹರಟೆ ಎಂತಲೋ ವಿತಂಡವಾದ ಎಂತಲೋ ಕಾಣಬಹುದು. ತೀರಾ ಅಕಾಡೆಮಿಕ್ ಆಗಿ, ಉಲ್ಲೇಖಗಳೊಂದಿಗೆ ನಡೆಸುವ ಚರ್ಚೆಗಿಂತ ನಾನು ಈ ನಾಡಿನ ಬಹುಸಂಖ್ಯಾತರ ಕಾಮನ್‌ಸೆನ್ಸ್‌ನ ಭಾಗವಾಗಿರುವ ವಿಚಾರಗಳನ್ನಷ್ಟೇ ಮುಂದಿಡಲು ಬಯಸುತ್ತೇನೆ.
ಮಾಂಸಾಹಾರವನ್ನು ವಿರೋಧಿಸುವವರು ಹಿಂಸೆಯ ಬಗ್ಗೆ ಮಾತನಾಡುತ್ತಾರೆ. ಮಾನವೀಯತೆಯ ಬಗ್ಗೆ ಮಾತನಾಡುತ್ತಾರೆ. ಇಂದಿನ ವ್ಯವಸ್ಥೆಯಲ್ಲಿ ಯಾವುದು ಹಿಂಸೆ, ಯಾವುದು ಮಾನವೀಯತೆ ಎನ್ನುವುದೂ ಬಹಳ ಚರ್ಚಾಸ್ಪದ. ಇವುಗಳ ಬಗ್ಗೆ ಏಕಸೂತ್ರವಾಗಲೀ, ಏಕಾಭಿಪ್ರಾಯವಾಗಲೀ ಇಲ್ಲ. ಇವು ಒಂದು ಬಗೆಯಲ್ಲಿ ಸಾಪೇಕ್ಷ ಮೌಲ್ಯಗಳು.
ಆದರೆ ನನ್ನ ಪ್ರಕಾರ ಭಾರತದ ಮೆಜಾರಿಟಿ ಜನರು ಮೀನು, ಕೋಳಿ, ಕುರಿ, ಹಂದಿ, ಅಥವಾ ಇನ್ನಾವುದೇ ಪ್ರಾಣಿಗಳನ್ನು. (ನಮ್ಮ ದೇಶದ ಮುಸ್ಲಿಮರು, ಮಾದಿಗರು ದನ, ಎಮ್ಮೆ ತಿನ್ನುತ್ತಾರೆ ಹಾಗೂ ಪ್ರಪಂಚದ ಮೆಜಾರಿಟಿ ಜನರು ಜನರು ಬೀಫ್, ಪೋರ್ಕ್ ತಿನ್ನುತ್ತಾರೆ, ಈಶಾನ್ಯ ಭಾರತ ರಾಜ್ಯಗಳಲ್ಲಿ ನಾಯಿಯನ್ನೂ ತಿನ್ನುತ್ತಾರೆ. (ನಮ್ಮ ರಾಜ್ಯದಲ್ಲಿ ಬ್ರಾಹ್ಮಣರು, ಲಿಂಗಾಯತರು. ಕರಾವಳಿಯಲ್ಲಿ ಹಾಗೂ ಉತ್ತರದ ಕೆಲವು ರಾಜ್ಯಗಳಲ್ಲಿ ಬ್ರಾಹ್ಮಣರೂ ಮಾಂಸಹಾರಿಗಳೇ. ನಿಮಗೆ ತಿಳಿದಿರಬಹುದು. ನಮ್ಮ ಪರಿಸರದಲ್ಲಿ ಮಾಂಸಹಾರಿ ಸಸ್ಯಗಳೂ ಇವೆ. ನಮ್ಮೂರಿನಲ್ಲ್ಲಿ ಸಣ್ಣ ಪುಟ್ಟ ಇರುವೆಗಳನ್ನು ತಿನ್ನುವ ಸಸ್ಯಗಳನ್ನು ನಾನು ನೋಡಿದ್ದೇನೆ. ಹಿಂದೆ ದೊಡ್ಡ ಪ್ರಾಣಿಗಳನ್ನು ತಿನ್ನುವ ಸಸ್ಯಗಳೂ ಇದ್ದವೆಂದು ಹೇಳುತ್ತಾರೆ) ತಿನ್ನುವುದಕ್ಕೂ, ಇದೇ ಜನರು ಮಾಂಸಾಹಾರದೊಂದಿಗೆ ಸಸ್ಯಾಹಾರವನ್ನೂ ಹಾಗೂ ಕೆಲವೇ ಜನರು ಬರೀ ಸಸ್ಯಾಹಾರ ಸೇವಿಸುವುದಕ್ಕೂ ಜೈವಿಕವಾಗಿ ಯಾವುದೇ ವ್ಯತ್ಯಾಸವಿಲ್ಲ. ಯಾಕೆಂದರೆ ಜೀವದ ವಿಷಯಕ್ಕೆ ಬಂದರೆ ಪ್ರಾಣಿಗಳಿಗೂ ಸಸ್ಯಗಳಿಗೂ ವ್ಯತ್ಯಾಸವೇನಿಲ್ಲ. ಹಾಗೆ ನೋಡಿದರೆ ಪ್ರಾಣಿಗಳಿಗಿಂತಾ ಸಸ್ಯಗಳು ತೀರಾ ಪಾಪದವು. ಪ್ರಾಣಿಗಳಾದರೋ ತಮಗೆ ನೋವಾದರೆ ಅದನ್ನು ವ್ಯಕ್ತಪಡಿಸುತ್ತವೆ. ಆದರೆ ಸಸ್ಯಗಳು ಅದನ್ನೂ ಮಾಡಲು ಆಗುವುದಿಲ್ಲ. ಅವು ಮೂಕಜೀವಿಗಳು. ಪ್ರಾಣಿಗಳಾದರೋ ಒಂದೇ ಏಟಿಗೆ ಸಾಯುತ್ತವೆ. ಆದರೆ ಸಸ್ಯಗಳನ್ನು ಕಡಿದು, ಅವುಗಳ ಸಿಪ್ಪೆ (ಚರ್ಮ) ಸುಲಿದು, ಒಲೆಯ ಬೆಂಕಿಯ ಮೇಲಿಟ್ಟರೂ ಪೂರ್ತಿ ಜೀವ ಕಳೆದುಕೊಂಡಿರುವುದಿಲ್ಲ. ಅವುಗಳ ಜೀವಕೋಶಗಳೆಲ್ಲಾ ಪೂರ್ತಿ ಸತ್ತುಹೋದ ಮೇಲಷ್ಟೇ ಬೆಂದಿತು ಎನ್ನುತ್ತೇವೆ. ವಾದಿಸುವುದಾದರೆ ಪ್ರಾಣಿಗಳ ಮೇಲಿನ ಹಿಂಸೆಗಿಂತಾ ಹೆಚ್ಚಿನ ಹಿಂಸೆ ಇದು ಎನ್ನಬಹುದು. ಈ ನಿಟ್ಟಿನಲ್ಲಿ ನೋಡಿದಾಗ ನಾವು ಸಸ್ಯಗಳನ್ನು ಹೊಲಗಳಲ್ಲಿ ಕಟಾವು ಮಾಡುವುದೇ ಒಂದು ಸಾಮೂಹಿಕ ಬಲಿ. ಇದನ್ನು ಸಸ್ಯ ಬಲಿ ಎಂದು ಯಾರಾದರೂ ಕರೆದಿದ್ದಾರಾ? ಕರೆಯುವುದಿಲ್ಲ ಯಾಕೆ?
ಸಸ್ಯಾಹಾರ ಸಹಜವಾದದ್ದಾದರೆ ಮಾಂಸಾಹಾರ ಸಹಜ ಯಾಕಲ್ಲ? ಪರಿಸರದಲ್ಲಿ. ಕೇವಲ ಸಸ್ಯಾಹಾರಿಗಳೂ, ಕೇವಲ ಮಾಂಸಹಾರಿಗಳೂ ಇರುವಂತೆ ಬೆಕ್ಕು, ಹಾವು, ಮನುಷ್ಯನಂತಹ ಸರ್ವಾಹಾರಿ (ಆಮ್ನಿವೋರಸ್) ಜೀವಿಗಳಿವೆ. ಇದು ಸಹಜವಾದದ್ದು. ಒಂದು ಜೀವಿಯನ್ನು ಇನ್ನೊಂದು ಜೀವಿ ಅವಲಂಬಿಸಿಯೇ ಬದುಕುತ್ತದೆ. ಅದು ಪ್ರಾಣಿಯೋ ಸಸ್ಯವೋ ಎನ್ನುವುದು ಯಾಕೆ ಮುಖ್ಯವಾಗಬೇಕು? ಆದರೆ ಸಾಮಾನ್ಯವಾಗಿ ಜೀವಿಗಳು ಸಮಾನ ಪ್ರಜ್ಞೆಯ ಜೀವಿಗಳನ್ನು ತಿನ್ನುವುದಿಲ್ಲ. ಅಷ್ಟೆ. ಅದು ಕಾರ್ಯಸಾಧ್ಯವೂ ಅಲ್ಲ.
ಹಲವಾರು ಜನರು ನಾಗರಿಕತೆ, ಮಾನವೀಯತೆ ಮುಂತಾದ ನೆಪಗಳಲ್ಲಿ ಕುರಿಕೋಳಿ ಕಡಿಯುವುದನ್ನು ವಿರೋಧಿಸುತ್ತಾರೆ. ಮನುಷ್ಯನ ಸಹಜ ಆಹಾರವಾದ ಕುರಿಕೋಳಿಗಳ ಬಗ್ಗೆ ಕಾಳಜಿ ತೋರುವ ಇವರು ಸಹಮನುಷ್ಯರ ಬಗ್ಗೆ ಯಾಕೆ ಕಾಳಜಿ ತೋರುವುದಿಲ್ಲ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಇತ್ತೀಚೆಗೆ ಕೊಪ್ಪಳದ ಬಳಿ ಕರಡಿ ಆಡಿಸುವವವರ ಕಸುಬನ್ನು ಪ್ರಾಣಿ ದಯಾಸಂಘ ಹಾಗೂ ಸರ್ಕಾರ ಸೇರಿ ಬಲವಂತವಾಗಿ ಬಿಡಿಸಿ ಕರಡಿ ಆಡಿಸುವ ಸಮುದಾಯವನ್ನೂ, ಅವರಿಲ್ಲದೇ ಬದುಕಲು ಕಷ್ಟಪಡುತ್ತಿರುವ ಕರಡಿಗಳನ್ನೂ ಬೇರ್ಪಡಿಸಿದ್ದು. ಇಂದು ಆ ಇಡೀ ಸಮುದಾಯದ ನೋವು ಈ ದಯಾಮಯಿಗಳಿಗೆ ಕಾಣಲೇ ಇಲ್ಲ.
ಸಾಮೂಹಿಕವಾಗಿ ಪ್ರಾಣಿಗಳನ್ನು ಕಡಿಯುವುದು ದೇವರ ಹೆಸರಲ್ಲಿಯೇ ನಡೆಯುತ್ತದೆಯಾದರೂ ಅದರಲ್ಲಿ ಮಾಂಸಹಾರದ ಬಹಿರಂಗ ಸಮರ್ಥನೆ ಇದೆ ಎಂತಲೇ ನನ್ನ ಭಾವನೆ. ನಗರಗಳಲ್ಲಿ ಪಕ್ಕದ ಮನೆಯ ಲಿಂಗಾಯತರಿಗೋ ಬ್ರಾಹ್ಮಣರಿಗೋ ಗೊತ್ತಾಗದಂತೆ ಮಾಂಸದ ಅಂಗಡಿಯಲ್ಲೇ ಎಲ್ಲಾ ಮಾಡಿಸಿಕೊಂಡು ಬಂದು ಒಲೆ ಮೇಲೆ ಬೇಯಿಸಬೇಕಾದ ಪರಿಸ್ಥಿತಿ ಹಳ್ಳಿಗಳಲ್ಲಿ ಇರುವುದಿಲ್ಲ. ಜನರು ಸಂತೋಷದಿಂದಲೇ ಹೋಗಿ ತಾವು ಅಪರೂಪಕ್ಕೆ ತಿನ್ನುವ ವಿಶೇಷ ಆಹಾರವನ್ನು ಸಾಮೂಹಿಕವಾಗಿ ತಯಾರು ಮಾಡುತ್ತಾರೆ. ಪಕ್ಕಾ ಸಸ್ಯಾಹಾರದ ಪ್ರತಿಪಾದಕರು ಮತ್ತು ಪ್ರಾಣಿ ಪ್ರೇಮವುಳ್ಳವರು ಹೀಗೆ ಮಾಡುವುದರಲ್ಲಿ ಜೀವವಿರೋಧಿತನವನ್ನು ಕಾಣಬಹುದೇನೋ. ಆದರೆ ನನ್ನ ಪ್ರಕಾರ ಯಾರು ಪ್ರಾಣಿಗಳನ್ನು ತಿನ್ನುತ್ತಾರೋ ಅವರೇ ಆ ಜೀವಗಳಿಗೆ ಕಾರಣವಾಗುವಂತವರು. ಉದಾಹರಣೆಗೆ, ನಮ್ಮ ಉರಿನಲ್ಲಿ ಒಂಭತ್ತು ವರ್ಷಕ್ಕೊಮ್ಮೆ ನಡೆಯುವ ಮಾರಿಜಾತ್ರೆಯ ದಿನ ಮನೆಗೊಂದರಂತೆ ಎಂದರೂ ಐನೂರು ಕುರಿಗಳನ್ನು ಕಡಿಯಲಾಗುತ್ತದೆ. ಹೀಗೆ ೫೦೦ ಕುರಿಗಳು ಒಂದೇ ದಿನ ಸಾಯುವುದನ್ನು ಕಲ್ಪಿಸಿಕೊಂಡ ಪ್ರಾಣಿಪ್ರಿಯರು ಶಾಂತಂ ಪಾಪಂ ಎಂದು ಹಿಂಸೆ ಪಟ್ಟುಕೊಳ್ಳಬಹುದು. ಆದರೆ ಒಂದೊಮ್ಮೆ ನಮ್ಮೂರಿನ ಜನರೆಲ್ಲರೂ ಸಸ್ಯಾಹಾರಿಗಳೇ ಆಗಿದ್ದಿದ್ದಲ್ಲಿ ಆ ಐನೂರು ಪ್ರಾಣಿಗಳೂ (ಆಡುಗಳು) ಈ ಭೂಮಿಯ ಮೇಲೆ ಜನ್ಮ ತಾಳಲು ಅವಕಾಶವೇ ಇರುತ್ತಿರಲಿಲ್ಲ. ಮಟನ್, ಚಿಕನ್ ತಿನ್ನಬಾರದು ಎಂದು ಹೇಳುವುದು ಕೋಳಿಗಳ, ಕುರಿಗಳ ಸಂತತಿಯನ್ನು ಭೂಮಿಯ ಮೇಲೆ ಉಳಿಸಲೇಬಾರದು ಎಂದು ಹೇಳಿದಂತೆ.
ಇನ್ನು ಪ್ರಾಣಿ ಪ್ರೀತಿಯ ಕುರಿತು ಮಾತನಾಡುವುದಾದರೆ ಹಳ್ಳಿಗಳಲ್ಲಿ ಜನರು ಕುರಿಕೋಳಿಗಳನ್ನು ಸಾಕುವಾಗ ಅವುಗಳನ್ನು ಮುಂದೆ ತಿನ್ನುವುದೇ ಆದರೂ ಅವುಗಳನ್ನು ಸಾಕಷ್ಟು ಪ್ರೀತಿ, ಜತನದಿಂದಲೇ ಸಾಕುತ್ತಾರೆ. ಕೋಳಿ ಮರಿಯೊಂದನ್ನು ಹದ್ದು ಕಚ್ಚಿಕೊಂಡು ಹೋದರೆ ಮುಂದೆ ತಿನ್ನಲು ಒಂದು ಕೋಳಿ ಕಡಿಮೆಯಾಯಿತಲ್ಲಾ ಎಂದು ಯಾರೂ ಯೋಚಿಸುವುದಿಲ್ಲ. ಬದಲಾಗಿ ಅದರ ಮೇಲಿನ ಕಾಳಜಿಯಿಂದ ಮರುಗುತ್ತಾರೆ. ಹಾಗೆಯೇ ಜಾತ್ರೆಗಾಗಿ ತಂದ ಕುರಿಯನ್ನು ಸಾಕುವಾಗ ಅದರೊಂದಿಗೆ ಒಂದು ಬಾಂಧವ್ಯವೂ ಇರುತ್ತದೆ. ಆದರೆ ಅವುಗಳನ್ನು ಸಾಕುವ ಉದ್ದೇಶವೇ ತಿನ್ನುವುದಕ್ಕಾಗಿ ಎಂಬುದೂ ಸರ್ವವಿಧಿತವಾಗಿರುತ್ತದಷ್ಟೆ. ಹದಿನೈದು ದಿನಗಳ ಹಿಂದೆ ನಮ್ಮ ಮನೆಯ ಎಮ್ಮೆ ಅನಿರೀಕ್ಷಿತವಾಗಿ ತೀರಿಕೊಂಡು ಬಿಟ್ಟಿತು. ಮನೆಯವರೆಲ್ಲರಿಗೂ ದುಃಖವಾಯಿತು. ಕಾರಣ ಕಳೆದ ನಾಲ್ಕಾರು ವರುಷಗಳಿಂದ ಅದರೊಂದಿಗಿನ ನಮ್ಮ ಒಡನಾಟ. ಅದರಿಂದ ನಾವು, ನಮ್ಮಿಂದ ಅದು ಎಂಬಂತಿತ್ತು. ಸರಿ. ಬೆಳಿಗ್ಗೆ ನಮ್ಮೂರಲ್ಲಿ ಗಫಾರರು ಎಂದು ಕರೆಯುವವರಿಗೆ ಹೇಳಿ ಕಳುಹಿಸಲಾಯಿತು. ಅವರು ಅದನ್ನು ಮಾಂಸಕ್ಕಾಗಿ ಎತ್ತಿಕೊಂಡು ಹೋದರು. ಇದು ಪ್ರತಿ ಊರಿನಲ್ಲಿ ಕಾಣುವ ದೃಶ್ಯ. ಇದು ರೈತಾಪಿ ಬದುಕಿನ ಸಹಜತೆಯಲ್ಲಿ ಸೇರಿರುತ್ತದೆ. ಪ್ರತಿವರ್ಷದ ದೀಪಾವಳಿಯಲ್ಲಿ ದನ ಹಸುಗಳಿಗೆ ನಾವು ಪಾದ ಪೂಜೆ ಪಾಡುತ್ತೇವೆ. ಅವು ಸತ್ತ ಮೇಲೆ ಅದನ್ನು ತಿನ್ನುವ ಜನರಿಗೇ ಒಪ್ಪಿಸುತ್ತೇವೆ. ತಿನ್ನುವವರು ಅಷ್ಟರ ಮಟ್ಟಿಗೆ ತಿನ್ನದವರನ್ನು ಸಂಕಟದಿಂದ ಪಾರು ಮಾಡುತ್ತಾರೆ.
ಹೀಗಾಗಿ ಮಾಂಸಾಹಾರ ಈ ಜಗತ್ತಿನಲ್ಲಿ ಸಹಜವಾದದ್ದು. ಹಾಗೆಯೇ ಸೊಕಾಲ್ಡ್ ಪ್ರಾಣಿಬಲಿಯ ಮೂಲಕ ಮಾಂಸಾಹಾರದ ಬಹಿರಂಗ ಸಮರ್ಥನೆಯೂ ಕೂಡಾ. ಇದನ್ನು ನಿಷೇಧಿಬೇಕಿಲ್ಲ. ಅದು ನಮ್ಮ ಸಂಸ್ಕೃತಿಯ ಒಂದು ಭಾಗವಷ್ಟೇ. ಅದು ಇತಿಹಾಸ ಕ್ರಮದಲ್ಲಿ ರಹಮತ್ ತರೀಕೆರೆಯವರು ಹೇಳಿದಂತೆ ಅದು ಪ್ರತಿಸಂಸ್ಕೃತಿಯೂ ಇರಬಹುದು. ಇನ್ನು ರೂಪಾ ಹಾಸನ್ ಅವರು ಉಲ್ಲೇಖಿಸಿರುವ ಪ್ರಾಣಿಬಲಿ ನಿಷೇಧ ಕಾಯ್ದೆಗಳನ್ನು ಮಾಡಿರುವವರ ಉದ್ದೇಶವೂ ಪ್ರಶ್ನಾರ್ಹವಾದದ್ದೇ. ಇತ್ತೀಚೆಗೆ ಜಾನುವಾರು ಹತ್ಯಾ ಕಾಯ್ದೆಯನ್ನು ಕರ್ನಾಟಕ ಸರ್ಕಾರವು ಸಂಘಪರಿವಾರದ ಕುಮ್ಮಕ್ಕಿನಿಂದ ಜಾರಿಗೊಳಿಸಿತು. ಹಾಗಂತ ಸಂಘಪರಿವಾರಕ್ಕೆ ಮಾನವಪ್ರೇಮ ಇದೆ ಎನ್ನಲು ಸಾಧ್ಯವೇ. ಪ್ರಾಣಿಗಳ ಬಗ್ಗೆ ಕೃತಕ ದಯೆ ತೋರುವ ಅನೇಕರು ಆಂತರ್ಯದಲ್ಲಿ ಜಾತಿ ಲಿಂಗ ಅಸಮಾನತೆಯನ್ನು ಪ್ರತಿಪಾದಿಸುವವರೂ ಮನುಷ್ಯರನ್ನು ಧರ್ಮದ ಹೆಸರಲ್ಲಿ ಕೊಚ್ಚಿ ಕೊಲ್ಲುವುದನ್ನೂ, ಹಾಗೂ ಹೆಣ್ಣೊಂದರ ಭ್ರೂಣವನ್ನು ಸೀಳುವುದನ್ನು ಸಮರ್ಥಿಸುವವರೂ ಆಗಿತ್ತಾರಲ್ಲಾ.... ಇದ್ಯಾಕೆ?
ಪ್ರಾಣಿಹಿಂಸೆ, ಮಾನವೀಯತೆ, ದಯೆ ಇಂತಹವುಗಳ ಬಗ್ಗೆ ಚರ್ಚಿಸುವಾಗ ಈ ಪ್ರಶ್ನೆಗಳೂ ಮುಖ್ಯವಾಗುತ್ತವೆ. ಇವುಗಳನ್ನು ಬಿಟ್ಟು ಯೋಚಿಸಿದಾಗ ಕಿರಣ್ ಹೇಳಿದಂತೆ ನಾವು ನಮ್ಮತನವನ್ನೇ ಅಲ್ಲಗಳೆದುಕೊಳ್ಳಬೇಕಾಗುತ್ತದೆ.

发表评论