ಸೋನಿಯಾ ಗಾಂಧಿ ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಕ್ಯಾನ್ಸರ್ ಆಗಿರಬಹುದು ಎಂಬುದು ಮೀಡಿಯಾ ಊಹೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನೇನು ಒದಗಿಸಿಲ್ಲ. ಅವರು ಬೇಗ ಗುಣಮುಖರಾಗಲಿ. ಮನುಷ್ಯತ್ವ ಉಳ್ಳವರು ಹೇಳುವ ಮಾತು ಇದು.

ಆದರೆ ಸೋನಿಯಾ ಖಾಯಿಲೆ ಕುರಿತ ಸುದ್ದಿಗಳು ಹೊರಬರುತ್ತಿದ್ದಂತೆ ಅದಕ್ಕೆ ಫೇಸ್‌ಬುಕ್, ಟ್ವಿಟರ್‌ಗಳಂಥ ಸಾಮಾಜಿಕ ತಾಣಗಳಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳು ಹೇಸಿಗೆ ಹುಟ್ಟಿಸುತ್ತವೆ. ಸೋನಿಯಾಗೇ ಆರೋಗ್ಯ ಚೆನ್ನಾಗೇ ಇದೆ, ಸ್ವಿಸ್ ಬ್ಯಾಂಕ್‌ನಲ್ಲಿರುವ ಹಣ ಮುಚ್ಚಿಡಲು ಹೋಗಿದ್ದಾರೆ ಎನ್ನುತ್ತವೆ ಕೆಲವು ಪ್ರಭೃತಿಗಳು. ಇಂಡಿಯಾದಲ್ಲಿ ಆಸ್ಪತ್ರೆಗಳು ವೈದ್ಯರುಗಳು ಇರಲಿಲ್ಲವೇ? ವಿದೇಶಕ್ಕೆ ಏಕೆ ಹೋಗಬೇಕಿತ್ತು ಎಂದು ಪ್ರಶ್ನಿಸುತ್ತಾರೆ ಇನ್ನಷ್ಟು ಮುಠ್ಠಾಳರು. ಕೆಲವರ ಫೇಸ್‌ಬುಕ್ ಸ್ಟೇಟಸ್‌ಗಳನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೂ ಹಿಂಜರಿಕೆಯಾಗುತ್ತದೆ. ಇದೇ ಒಂದು ಖಾಯಿಲೆಯಂತೆ ಒಬ್ಬರಿಂದ ಒಬ್ಬರಿಗೆ ಹರಡುತ್ತ ಎಲ್ಲ ಕಡೆಯೂ ಕೊಳಕು ಗಬ್ಬು ನಾರುತ್ತಿದೆ. ವಿಕಿಲೀಕ್ಸ್‌ನಲ್ಲಿ ಸ್ವಿಜ್ ಬ್ಯಾಂಕ್ ಅಕೌಂಟುಗಳನ್ನು ಹೊಂದಿರುವವರ ಪಟ್ಟಿ ಹೊರಬಂದಿದೆ ಎಂದು ಸುಳ್ಳೇಸುಳ್ಳು ಸುದ್ದಿಗಳನ್ನು ಸೃಷ್ಟಿಸಿ, ಅದರಲ್ಲಿ ಸೋನಿಯಾ, ಕುಮಾರಸ್ವಾಮಿಯವರ ಹೆಸರುಗಳನ್ನು ಸೇರಿಸಿ, ಅದನ್ನೇ ಆಧಾರವಾಗಿಟ್ಟುಕೊಂಡು ಚರ್ಚೆ ನಡೆಸುತ್ತಿದ್ದಾರೆ ಕೆಲವು ತರಲೆಗಳು.

ಸೋನಿಯಾ ಗಾಂಧಿ ಒಂದು ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗು ಈಗ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಯುಪಿಎ ಒಕ್ಕೂಟದ ಅಧ್ಯಕ್ಷರು. ಯಾರಿಗಾದರೂ ಅವರ ಅಥವಾ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷದ ಕುರಿತು ಸಿಟ್ಟು, ಆಕ್ರೋಶವಿದ್ದರೆ ಆರೋಗ್ಯಕರವಾಗಿ ಚರ್ಚಿಸುವ ಅವಕಾಶವಿರುತ್ತದೆ. ಡೆಮಾಕ್ರಸಿ ಇರುವುದೇ ಹಾಗೆ. ಆದರೆ ಒಬ್ಬ ಹೆಣ್ಣುಮಗಳ ಕುರಿತು, ಅದೂ ಆಕೆ ಅನಾರೋಗ್ಯದಿಂದ ಬಳಲುವಾಗ ಅದನ್ನೇ ಕೊಳಕಾಗಿ ವಿಶ್ಲೇಷಿಸುವ ಜನರಿಗೆ ಏನು ಹೇಳುವುದು. ಸೋನಿಯಾಗಿರುವ ಖಾಯಿಲೆ ದೇಹಕ್ಕೆ ಸಂಬಂಧಿಸಿದ್ದು, ಅದು ವಾಸಿಯಾಗುತ್ತದೆ. ಆದರೆ ಇಂಥವರ ಮನಸ್ಸುಗಳಲ್ಲೇ ಕ್ಯಾನ್ಸರ್, ಏಡ್ಸ್‌ಗಳಿವೆಯಲ್ಲ ಅದು ವಾಸಿಯಾಗುವುದು ಹೇಗೆ?

ಬಹುತೇಕ ಇಂಥ ವರಸೆಯ ಪ್ರಚಾರದಲ್ಲಿ ತೊಡಗಿರುವವರು ತಥಾಕಥಿತ ದೇಶಭಕ್ತರು. ದೇಶಭಕ್ತರದ್ದೇ ಪಾರ್ಟಿಯಾದ ಭಾರತೀಯ ಜನತಾ ಪಕ್ಷದ ಮುಖಂಡರು ಕಳೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರ ವಿದೇಶೀ ಮೂಲವನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಚುನಾವಣಾ ಪ್ರಚಾರ ನಡೆಸಿದ್ದರು. ಬಿಜೆಪಿಯ ಬಹುತೇಕ ಘಟಾನುಘಟಿ ಮುಖಂಡರೆಲ್ಲ ಇಟಾಲಿಯನ್ ಸೋನಿಯಾ ಕೈಗೆ ಅಧಿಕಾರ ಕೊಡಬೇಡಿ ಎಂದೇ ಭಾಷಣ ಮಾಡಿದ್ದರು. ಆದರೆ ಜನರು ಬೇರೆಯದೇ ತೀರ್ಮಾನ ಮಾಡಿದ್ದರು. ಇನ್ನೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಅದೇ ಯುಪಿಎ ಒಕ್ಕೂಟವನ್ನು ಅಧಿಕಾರಕ್ಕೆ ತಂದಿದ್ದರು. ಬುದ್ಧಿವಂತ ದೇಶಭಕ್ತರು ಸೋನಿಯಾ ಭಾರತೀಯಳೇ ಅಲ್ಲ ಎಂದು ಬಿಂಬಿಸಲು ಎಷ್ಟೆಲ್ಲಾ ಹರಸಾಹಸ ನಡೆಸಿದರೂ ಅದು ಫಲ ಕೊಡಲಿಲ್ಲ. ಯಾಕೆಂದರೆ ದೇಶದ ಜನಸಾಮಾನ್ಯರು ಈ ತರ್ಕವನ್ನು ಒಪ್ಪಲಿಲ್ಲ.

ನಿಜ, ಯುಪಿಎ ಸರ್ಕಾರ ಈಗ ಹಗರಣಗಳಲ್ಲಿ ಮುಳುಗಿ ಹೋಗಿದೆ. ೨ಜಿ, ಕಾಮನ್ವೆಲ್ತ್‌ನಿಂದ ಹಿಡಿದು ಭ್ರಷ್ಟಾಚಾರದ ಹಲವಾರು  ಪ್ರಕರಣಗಳಲ್ಲಿ ಅದು ಸಿಕ್ಕುಬಿದ್ದಿದೆ. ಅದಕ್ಕೆ ಯುಪಿಎ, ಕಾಂಗ್ರೆಸ್ ಬೆಲೆ ತೆರಲೇಬೇಕು. ಈಗಾಗಲೇ ಸಾಕಷ್ಟು ಭ್ರಷ್ಟರು ಜೈಲು ಸೇರಿದ್ದಾರೆ. ಇನ್ನಷ್ಟು ಮಂದಿ ಮುಂದೆಯೂ ಹೋಗುತ್ತಾರೆ. ಒಂದು ವೇಳೆ ಸೋನಿಯಾ ಮತ್ತವರ ತಂಡವೂ ಎಲ್ಲ ಹಗರಣಗಳಲ್ಲಿ ಭಾಗಿಯಾಗಿದ್ದರೆ ಅವರನ್ನು ಜನರೇ ತಿರಸ್ಕರಿಸುತ್ತಾರೆ.

ಹಾಗೆಂದ ಮಾತ್ರಕ್ಕೆ ಕ್ಯಾನ್ಸರ್‌ನಂಥ ಖಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಸತ್ತೇ ಹೋಗಲಿ ಎಂದು ಬಯಸುವವರ ಮನಸ್ಥಿತಿಗೇನಾಗಿದೆ? ಸೋನಿಯಾ ಅವರ ಅರೆನಗ್ನ ಚಿತ್ರಗಳನ್ನು ಸೃಷ್ಟಿಸಿ ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿರುವವರು ನಿಜವಾಗಿಯೂ ಹೆಣ್ಣಮಕ್ಕಳನ್ನು ಪೂಜಿಸುವ, ಗೌರವಿಸುವ ಪರಂಪರೆಗೆ ಸೇರಿದವರಾ? ಇಂಥ ವಿಕೃತರೆಲ್ಲ ತಮ್ಮನ್ನು ತಾವು ದೇಶಭಕ್ತರು, ಧರ್ಮಭಕ್ತರು ಎಂದು ಹೇಳಿಕೊಳ್ಳುವುದಾದರೂ ಹೇಗೆ?

ಸೋನಿಯಾಗಾಂಧಿಯೋ, ವಾಜಪೇಯಿಯೋ, ದೇವೇಗೌಡರೋ ಯಾರೇ ಅನಾರೋಗ್ಯಕ್ಕೆ ಒಳಗಾದರೂ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುವುದು ಮನುಷ್ಯತ್ವದ ಕ್ರಿಯೆ. ಇಂಥ ಸಂದರ್ಭದಲ್ಲೂ ಹೇಟ್ ಕ್ಯಾಂಪೇನ್‌ಗಳನ್ನು ನಡೆಸುತ್ತ ಕೊಳಕು ಮಾತುಗಳನ್ನಾಡುವವರು ನಿಜವಾದ ಅರ್ಥದಲ್ಲಿ ರೋಗಗ್ರಸ್ಥರು. ಅವರು ಬೇಗ ಗುಣಮುಖರಾಗಬೇಕಿದೆ. ಗುಣಮುಖರಾಗಲಿ ಎಂಬುದು ನಮ್ಮ ಹಾರೈಕೆ.
0 komentar

Blog Archive