ಸಮಯ ಚಾನಲ್‌ನ ಮುಖ್ಯಸ್ಥರಾದ ಶಶಿಧರ ಭಟ್ಟರು ರಾಜೀನಾಮೆ ಕೊಟ್ಟು ಹೊರಹೋದರೇ? ಇದ್ದಕ್ಕಿದ್ದಂತೆ ಹೀಗಾಗಲು ಕಾರಣ ಏನು? ಭಟ್ಟರ ಜಾಗಕ್ಕೆ ಬರುವವರು ಯಾರು? ಹೀಗೆ ಒಂದಾದ ಮೇಲೊಂದರಂತೆ ಪ್ರಶ್ನೆಗಳು ಪ್ರೆಸ್‌ಕ್ಲಬ್‌ನ ಕಲ್ಲಿನ ಟೇಬಲ್ಲುಗಳಿಂದ ಎದ್ದು ಸುದ್ದಿಮನೆಗಳಲ್ಲಿ ಓಡಾಡಿ, ಪತ್ರಕರ್ತರ ಮೊಬೈಲುಗಳಲ್ಲಿ ಮೆಸೇಜುಗಳ ಸ್ವರೂಪ ಪಡೆದುಕೊಂಡಿವೆ.

ಹೀಗೆ ಸುದ್ದಿ ಹರಡುವುದಕ್ಕೆ ಕಾರಣವಾಗಿರುವುದು ಫೇಸ್‌ಬುಕ್‌ನಲ್ಲಿ ಭಟ್ಟರು ಬರೆದಿರುವ ಅಮೂರ್ತ ಅರ್ಥವನ್ನು ಧ್ವನಿಸುವ ಒಂದು ಮಾತು.

ವಿದಾಯದ ಜೊತೆಗೆ ನೋವಿರುತ್ತದೆ. ಆದರೆ ವಿದಾಯ ಎಂದರೆ ಬಿಡುಗಡೆ. ಬಿಡುಗಡೆಯ ಸಂತೋಷ ವಿದಾಯದ ನೋವನ್ನು ಮರೆಸುತ್ತದೆ.

ವಿಶೇಷವೆಂದರೆ ಭಟ್ಟರು ಹೀಗೆ ವೈರಾಗ್ಯದ ಮಾತುಗಳನ್ನು ಬರೆಯುತ್ತಿರುವುದು ಇದೇ ಮೊದಲಲ್ಲ. ಜೂನ್ ತಿಂಗಳಿಂದೀಚಿಗೆ ಅವರು ಬರೆಯುತ್ತಿರುವುದೆಲ್ಲ ಇದೇ ಮಾದರಿಯ ಸ್ಟೇಟಸ್‌ಗಳು. ಕೆಲವನ್ನು ನೀವೂ ಗಮನಿಸಿ ನೋಡಿ.

ಬದುಕು ಎನ್ನುವುದು ನದಿಯಂತೆ. ಅದು ಹರಿಯುತ್ತಲೇ ಇರಬೇಕು. ಆದರೆ ನದಿಗೆ ಅಣೆಕಟ್ಟುವ ಯತ್ನ ನಡೆಯುತ್ತಲೇ ಇರುತ್ತದೆ. 
ಜಂಗಮತ್ವ ಬದುಕಿಗೆ ಚಲನಶೀಲತೆಯನ್ನು ಕೊಡುತ್ತದೆ. ಸ್ಥಾವರಕ್ಕಳಿವುಂಟು ಜಂಗಮಕ್ಕಲ್ಲ 
ಬದುಕಿನಲ್ಲಿ ಎತ್ತರಕ್ಕೆ ಎರಿದವರಿಗೆ ಬೀಳುವ ಭಯ. ಕೆಳಗೆ ಇರುವವರಿಗೆ ಮೇಲೆರುವ ಕನಸು. ಆದ್ದರಿಂದ ಕೆಳಕ್ಕೆ ಇರುವುದೇ ಒಳ್ಳೆಯದು. 
ಬದುಕು ಹರಿಯುವ ನದಿಯಂತಿರಬೇಕು, ನದಿಗೆ ಅಣೆ ಕಟ್ಟು ಕಟ್ಟು ಕಟ್ಟಬಾರದು, ಆಗಲೇ ಚಂದ.
ಹೀಗೆಲ್ಲ ಬರೆದ ಭಟ್ಟರಿಗೆ ಅವರ ಫೇಸ್‌ಬುಕ್ ಗೆಳೆಯರು ಏನ್ಸಾರ್ ನಿಮ್ಮ ಮಾತು ಕೇಳಿದ್ರೆ, ನೀವು ಸಮಯ ಟಿವಿನೂ ಬಿಡೋ ಹಾಗೆ ಅನ್ನಿಸ್ತಾ ಇದೆ ಎಂದು ನೇರಾನೇರ ಕೇಳಿದ್ದಾರೆ. ಭಟ್ಟರು ಉತ್ತರಿಸಿದ ಹಾಗೆ ಕಾಣುವುದಿಲ್ಲ.

ಸಮಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದೇನೋ ನಿಜ. ಭಟ್ಟರ ಕಾಂಟ್ರಾಕ್ಟ್ ಅವಧಿಯೂ ಮುಗಿಯುತ್ತ ಬಂದಿದೆ ಎಂಬ ಮಾಹಿತಿಯಿದೆ. ಮ್ಯಾನೇಜ್‌ಮೆಂಟ್ ಬದಲಾದ ಮೇಲೆ ಬೇರೆ ಬೇರೆ ತರಹದ ಬದಲಾವಣೆಗಳು ನಡೆಯುತ್ತಲಿವೆ. ಆದರೆ ಭಟ್ಟರು ಅಲ್ಲಿಂದ ಕಾಲ್ತೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆಯೇ?

ಭಟ್ಟರು ಹೊರಹೋದರೆ, ಸಮಯದ ಸಾರಥ್ಯ ವಹಿಸುವವರು ಯಾರು ಎಂಬ ಪ್ರೀ ಮೆಚ್ಯೂರ್ ಪ್ರಶ್ನೆಯೂ ಈಗ ಉದ್ಭವವಾಗಿದೆ. ಮಹತ್ವಾಕಾಂಕ್ಷೆಯ ಜ್ವರದಲ್ಲಿ ಬೇಯುತ್ತಿರುವ ಜೂನಿಯರ್ ಪತ್ರಕರ್ತರೊಬ್ಬರು ಈ ಪೋಸ್ಟಿಗೆ ಫೈಟ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಮೊದಲೇ ಹೇಳಿದಂತೆ ಇದು ಪ್ರೀ ಮೆಚ್ಯೂರ್ ಪ್ರಶ್ನೆ.

ಹಾಗೆ ನೋಡಿದರೆ, ಕನ್ನಡ ಪತ್ರಕರ್ತರ ಪೈಕಿ, ಅತಿ ಹೆಚ್ಚು ಆತ್ಮಾವಲೋಕನದ ಮಾತುಗಳನ್ನು ಆಡಿದವರು ಶಶಿಧರ ಭಟ್ಟರು. ತಮ್ಮ ಬ್ಲಾಗ್ ಕುಮ್ರಿಯ ಮೂಲಕ, ಕಾರ್ಯಕ್ರಮಗಳ ವೇದಿಕೆಗಳಲ್ಲಿ ಭಟ್ಟರು ಆಗಾಗ ಮಾಧ್ಯಮಗಳ ಕುರಿತು ಮಾತನಾಡುತ್ತಲೇ ಬಂದಿದ್ದಾರೆ. ಇತ್ತೀಚಿಗೆಯಂತೂ ಬಹಳ ನಿಷ್ಠುರವಾಗಿಯೇ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತ ಬಂದಿದ್ದಾರೆ. ಮ್ಯಾನೇಜ್‌ಮೆಂಟುಗಳೊಂದಿಗೆ ಹೊಂದಿಕೊಂಡು ಹೋಗದಿದ್ದರೆ ಅವರು ನಮ್ಮನ್ನು ಸಂಸ್ಥೆಯಿಂದ ಹೊರಕಳುಹಿಸುತ್ತಾರೆ ಎಂಬ ಕಟುಸತ್ಯವನ್ನು ನಿರ್ಭಿಡೆಯಿಂದ ಹೇಳುತ್ತ ಬಂದಿದ್ದಾರೆ. ಪತ್ರಕರ್ತರು ಪತ್ರಕರ್ತರಾಗಿದ್ದುಕೊಂಡೇ ರಿಯಲ್ ಎಸ್ಟೇಟ್ ವ್ಯಾಪಾರಿಗಳಾಗಿರುವ, ದಳ್ಳಾಳಿಗಳಾಗಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಭ್ರಷ್ಟಾಚಾರದಿಂದಲೇ ರಾಜಕಾರಣಿಯಾದ ಮಾಧ್ಯಮ ಸಂಸ್ಥೆ ಮಾಲೀಕರೊಬ್ಬರನ್ನು ನೇರವಾಗಿ ಜಾಡಿಸಿದ್ದರು. ಹೀಗೆ ಮಾತನಾಡುವ ಸಂದರ್ಭದಲ್ಲಿ ಅವರು ಎಸೆದ ಬಾಣಗಳು ಯಾರ‍್ಯಾರಿಗೆ ತಿವಿದವೋ? ಗೊತ್ತಿಲ್ಲ.

ಭಟ್ಟರು ತಮ್ಮ ಬ್ಲಾಗ್‌ನಲ್ಲಿ ಆಗಾಗ ಹೇಳುತ್ತಾ ಬಂದ ಮಾಧ್ಯಮ-ಪತ್ರಕರ್ತರ ಕುರಿತ ಮಾತುಗಳನ್ನು ಹೆಕ್ಕಿ ಇಲ್ಲಿ ನೀಡಿದ್ದೇವೆ. ಒಮ್ಮೆ ಗಮನಿಸಿ.

ನಾವೆಲ್ಲ ತುರ್ತು ಪರಿಸ್ಥಿತಿಯ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮವನ್ನು ಅತಿಯಾಗಿ ಪ್ರೀತಿಸಿ ಅದನ್ನು ಅಪ್ಪಿಕೊಂಡವರು. ಜೊತೆಗೆ ನಾವು ಅಂದರೆ ನನ್ನ ತಲೆಮಾರಿನವರು ಪತ್ರಿಕೋದ್ಯಮಕ್ಕೆ ಬರುವಾಗ ಕರ್ನಾಟಕದಲ್ಲಿ ಮೂರು ಜನಪರ ಚಳವಳಿಗಳಿದ್ದವು. ಆ ಚಳವಳಿಯ ಜೊತೆಗೆ ನಾವು ಬೆಳೆದೆವು, ಬೆಳೆಯುವುದಕ್ಕೆ ಯತ್ನ ಮಾಡಿದೆವು. ಜೊತೆಗೆ ನನ್ನಂಥವರನ್ನು ಬೆಳೆಸಲು ಬುದ್ದಿ ಹೇಳಲು ಖಾದ್ರಿ ಶಾಮಣ್ಣ, ವೈ ಎನ್ ಕೆ ಲಂಕೇಶ್ ಅವರಂತಹ ಸಂಪಾದಕರಿದ್ದರು. ಅವರು ಬೈದು ಬುದ್ದಿ ಹೇಳಿ ಬೆಳೆಸುತ್ತಿದ್ದರು. ಇಂತಹ ಸಂಪಾದಕರ ಜೊತೆ ಕೆಲಸ ಮಾಡಿ, ಬೈಸಿಕೊಂಡು ಪತ್ರಿಕೋದ್ಯಮದ ಆಳ ಆಗಲವನ್ನು ತಿಳಿದುಕೊಳ್ಳಲು ನಾವು ಯತ್ನ ಮಾಡಿದೆವು. ಈ ಯತ್ನ ಈಗಲೂ ಮುಂದುವರಿದಿದೆ. ಇಂತವರ ಸಹವಾಸ ನನ್ನಂತವರಿಗೆ ನಿಷ್ಠುರ ಮನಸ್ಥಿತಿಯನ್ನು ಬೆಳೆಸಿತು. ಸತ್ಯವನ್ನು ಸತ್ಯ ಎಂದು ಹೇಳುವ ಎದೆಗಾರಿಕೆ ಬರುವಂತೆ ಮಾಡಿತು. ಯಾವುದೇ ಸಂದರ್ಭದಲ್ಲಿ ಭ್ರಷ್ಠರಾಗದಂತೆ ಕಾದಿದ್ದು ಇಂತವರ ಜೊತೆ ಕೆಲಸ ಮಾಡಿದ ಅನುಭವ,

ಇಂದಿನ ಪತ್ರಿಕೋದ್ಯಮಿಗಳಿಗೆ ಇಂತಹ ಅನುಭವ ಇರುವುದು ಸಾಧ್ಯವಿಲ್ಲ. ಇವರೆಲ್ಲ ಜಾಗತೀಕರಣದ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮ ಉಳಿದೆಲ್ಲ ಉದ್ಯಮದಂತೆ ಉದ್ಯಮವಾಗಿ ಪರಿವರ್ತನೆಗೊಂಡಿದ್ದು ನಮಗೆ ಆಫಾತವನ್ನು ಉಂಟು ಮಾಡಿದರೆ, ಹೊಸ ತಲೆ ಮಾರಿನ ಪತ್ರಿಕೋದ್ಯಮಿಗಳಿಗೆ ಇದು ಒಂದು ಸಾಮಾನ್ಯವಾದ ಘಟನೆ. ಜೊತೆಗೆ ಅವರಿಗೆ ಮಾರ್ಗದರ್ಶನ ಮಾಡುವ ಸಂಪಾದಕರೂ ಇಲ್ಲ. ಇರುವ ಬಹುತೇಕ ಸಂಪಾದಕರು, ಪಾರ್ಟ್ ಟೈಮ್ ರಾಜಕಾರಣಿಗಳು. ಜೊತೆಗೆ ಆಡಳಿತ ವರ್ಗ, ರಾಜಕಾರಣಿಗಳು ಮತ್ತು ಉದ್ಯೋಗಿಗಳ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡುವವರು. ಇವರ ಗರಡಿಯಲ್ಲಿ ಬೆಳೆಯುತ್ತಿರುವವರು ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮಿಗಳಾಗುವುದಿಲ್ಲ. ಕೇವಲ ಏಜೆಂಟರುಗಳಾಗುತ್ತಾರೆ. ಇಂತಹ ಏಜೆಂಟರುಗಳಿಗೆ ಪತ್ರಿಕೋದ್ಯಮದ ಇತಿಹಾಸ ಬದ್ಧತೆ ಇರುವುದಿಲ್ಲ. ತಾವು ಬಳಸುವ ಭಾಷೆಯ ಬಗ್ಗೆ ಜ್ನಾನ ಇರುವುದಿಲ್ಲ.

ಇಂದು ಮಾಧ್ಯಮದಲ್ಲಿ ಇರುವವರಲ್ಲಿ ಬಹಳಷ್ಟು ಜನ ಮಾಧ್ಯಮದ ಗ್ಲಾಮರಿನಿಂದ ಬಂದವರು. ಇವರಿಗೆ ಹೇಳುವುದು ಇಷ್ಟೇ. ಸ್ವಲ್ಪ ಓದಿ, ಆಲೋಚನೆ ಮಾಡಿ. ಆರೋಗ್ಯ ಪೂರ್ಣವಾದ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಯತ್ನ ನಡೆಸಿ. ನಿಮ್ಮ ಮನಸ್ಸು ಆರೋಗ್ಯಪೂರ್ಣವಾಗಿರದಿದ್ದರೆ, ಬರವಣಿಗೆ ಆರೋಗ್ಯಪೂರ್ಣವಾಗಿರುವುದಿಲ್ಲ. ಬರವಣಿಗೆ ಆರೋಗ್ಯಪೂರ್ಣವಾಗಿರದಿದ್ದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿಬಿಡುತ್ತದೆ. ಜೊತೆಗೆ ಕನಿಷ್ಠ ಮನುಷ್ಯರಿಗೆ ಮನುಷ್ಯ ನೀಡುವ ಕನಿಷ್ಠ ಗೌರವ ನೀಡುವುದನ್ನು ಕಲಿತುಕೊಳ್ಳಿ.

***

ನನಗೆ ನಾನು ಮಾಡುವ ಕೆಲಸದ ಬಗ್ಗೆ ಜಿಗುಪ್ಸೆ ಮೂಡುತ್ತದೆ. ನಾನು ಪ್ರೀತಿಸುತ್ತ ಬಂದ, ನನಗೆ ಅನ್ನ ನೀಡುವ ಪತ್ರಿಕೋದ್ಯಮ ಪರಕೀಯ ಅನ್ನಿಸತೊಡಗುತ್ತದೆ. ನಾನು ನನ್ನ ಮನಸ್ಸು ಹೇಳುತ್ತಿರುವುದನ್ನು ಕೇಳುತ್ತಿದ್ದೇನೆಯೆ? ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವತ್ತ ನನ್ನ ಪತ್ರಿಕೋದ್ಯಮ ಕೆಲಸ ಮಾಡುತ್ತಿದೆಯೇ ? ಹೀಗೆ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ. ಇದಕ್ಕೆ ದೊರಕುವ ಉತ್ತರ ನನ್ನನ್ನು ಇನ್ನಷ್ಟು ಹತಾಶನನ್ನಾಗಿ ಮಾಡುತ್ತದೆ.

***
ಇವತ್ತಿನ ಪತ್ರಿಕೋದ್ಯಮಿಗಳಿಗೆ ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ಅವ್ರಿಗೆ ಪೂರ್ವ ಸಿದ್ಧತೆ ಇಲ್ಲ. ಪತ್ರಿಕೆಯಲ್ಲಿ ಕೆಲಸ ಮಾಡುವುದೆಂದೆಂದರೆ, ಐಟಿ ಬಿಟಿ ಕಂಪೆನಿಯಲ್ಲಿ ಕೆಲಸ ಮಾಡಿದಂತೆ ಅಲ್ಲ. ಇಲ್ಲಿ ಎಲ್ಲವನ್ನೂ ಕಂಪೂಟರುಗಳ ಮೂಲಕ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಪತ್ರಿಕೋದ್ಯಮ ಮನಸ್ಸಿನ ಕೆಲಸ. ಅಲ್ಲಿ ತುಂಬಾ ವಿಭಿನ್ನವಾದ ಕ್ರಿಯಾಶೀಲತೆ ಬೇಕು. ಒಂದು ಘಟನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡುವ ಚಾಕಚಕ್ಯತೆ ಬೇಕು. ಇದು ಅಷ್ಟು ಸುಲಭವಾಗಿ ಧಕ್ಕುವುದಿಲ್ಲ. ನಿರಂತರ ಓದು ಚಿಂತನೆ ಇದ್ದರೆ ಮಾತ್ರ ಇಂಥಹ ಮನಸ್ಥಿತಿ ರೂಪಗೊಳ್ಳುತ್ತದೆ. ಆದರೆ ಇಂದು ಮಾಧ್ಯಮದಲ್ಲಿ ಕೆಲಸ ಮಾಡುವವರಲ್ಲಿ ಇಂತಹ ಮನೋಧರ್ಮವೇ ಇಲ್ಲ.. 
          ***
ನಾನು ನಮ್ಮ ವಾಹಿನಿ ಪ್ರಾರಂಭವಾದ ದಿನದಿಂದ ಕ್ರೆಡಿಬಿಲಿಟಿಯ ಬಗ್ಗೆ ನಮ್ಮ ಹುಡುಗರ ಜೊತೆ ಮಾತನಾಡುತ್ತಲೇ ಇದ್ದೇನೆ. ವಿಶ್ವಾರ್ಹತೆ ಎಷ್ತು ಮುಖ್ಯ ಎಂದು ಹೇಳುತ್ತಲೇ ಇದ್ದೇನೆ. ಆದರೆ ನನ್ನ ಮಾತು ಯಾರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ನನಗೆ ಅನ್ನಿಸುವುದೆಂದರೆ, ಇಂದು ಮಾಧ್ಯಮ ಉಳಿದೆಲ್ಲ ಮಾಧ್ಯಮದಂತೆ ಬದಲಾಗಿದೆ, ಇಲ್ಲಿ ಕೆಲಸ ಮಾಡುವವರಿಗೂ ಯಾವುದೋ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರಿಗೂ ಯಾವುದೇ ವ್ಯತ್ಯಾಸ ಉಳಿದಿಲ್ಲ ಎಂದು! 
ಜೊತೆಗೆ ಇಂದಿನ ಪತ್ರಿಕೋದ್ಯಮಿಗಳಿಗೆ ಓದುವ ಅಭಿರುಚಿ ಕಡಿಮೆ. ಒಬ್ಬ ಪತ್ರಿಕೋದ್ಯಮಿ ಇಪ್ಪತ್ನಾಲ್ಕು ಗಂಟೆ ಪತ್ರಿಕೋದ್ಯಮಿಯೇ. ಆತ ಕನಿಷ್ಟ ದಿನಕ್ಕೆ ಎರಡು ಮೂರು ಗಂಟೆ ಓದಬೇಕು. ಕರ್ನಾಟಕದಲ್ಲಿ ಪತ್ರಿಕೋದ್ಯಮ ಮಾಡುವವರಿಗೆ ಇಲ್ಲಿನ ಬದುಕು, ಸಾಹಿತ್ಯ ಸಂಸ್ಕೃತಿ, ರಾಜಕೀಯ ಇತಿಹಾಸ, ಸಾಮಾಜಿಕ ಸಮಸ್ಯೆ, ಜನಪರ ಚಳವಳಿಗಳ ಬಗ್ಗೆ ಗೊತ್ತಿರಬೇಕು. ಆದರೆ ದೃಶ್ಯ ಮಾಧ್ಯಮದಲ್ಲಿ ಇರುವವರಂತೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಬಾಹ್ಯ ಸೌಂದರ್ಯವೇ ಮುಖ್ಯ ಎಂದುಕೊಂಡಿರುತ್ತಾರೆ. ಸೌಂದರ್ಯದ ಅಹಂಕಾರ ಅವರ ಕ್ರಿಯಾಶೀಲತೆಯನ್ನು ಕೊಂದು ಬಿಡುತ್ತದೆ ಎಂಬ ಸಾಮಾನ್ಯ ಜ್ನಾನವೂ ಅವರಿಗೆ ಇರುವುದಿಲ್ಲ.

ಜೊತೆಗೆ ನಮಗೆ ಮಾತನಾಡುವುದು ಗೊತ್ತಿದೆ. ಕೇಳಿಸಿಕೊಳ್ಳುವುದು ಗೊತ್ತಿಲ್ಲ. ದೃಶ್ಯ ಮಾದ್ಯಮದಲ್ಲಿ ಇರುವವರು ಮಾತನಾಡುವುದೇ ತಮ್ಮ ಕಾಯಕ ಎಂದುಕೊಂಡಿರುತ್ತಾರೆ. ಮೌನ ನಮಗೆ ನೀಡುವ ಕ್ರಿಯಾಶೀಲತೆ ಅರಿವು ಅವರಿಗೆ ಇರುವುದಿಲ್ಲ. ಇದನ್ನು ಯಾರನ್ನೂ ಉದ್ದೇಶಿಸಿ ನಾನು ಹೇಳುತ್ತಿಲ್ಲ. ನನ್ನನ್ನು ಸೇರಿದಂತೆ ಎಲ್ಲರೂ ಈ ಬಗ್ಗೆ ಯೋಚಿಸಬೇಕಾಗಿದೆ. 
***

ಮಾಧ್ಯಮದಲ್ಲಿ ಕೆಲಸ ಮಾಡುವವರೂ ಬದಲಾಗಿದ್ದಾರೆ. ಮಾಧ್ಯಮದಲ್ಲಿ ಕೆಲಸ ಮಾಡುವವರು ಸಂಪೂರ್ಣವಾಗಿ ಮಾಧ್ಯಮವನ್ನೇ ನಂಬಿಕೊಂಡು ಬದುಕುತ್ತಿಲ್ಲ. ಬಹಳಷ್ಟು ಜನರಿಗೆ ಬದುಕುವುದಕ್ಕೆ ಬೇರೆ ಬೇರೆ ದಾರಿಗಳಿವೆ. ಕೆಲವರು ಮಾಧ್ಯಮದಲ್ಲಿ ಕೆಲಸ ಮಾಡುವುದು ವಿಸಿಟಿಂಗ್ ಕಾರ್ಡಿಗಾಗಿ. ಇನ್ನೂ ಕೆಲವರಿಗೆ ಇದು ಪಾರ್ಟ್ ಟೈಮ್ ಜಾಬ್.

ನಮ್ಮ ನಡುವೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಪತ್ರಿಕೋದ್ಯಮಿಗಳಿದ್ದಾರೆ. ಗಣಿ ನಡೆಸುವ ಮಾಧ್ಯಮದ ವ್ಯಕ್ತಿಗಳಿದ್ದಾರೆ. ಹೋಟೇಲ್, ಬಾರ್ ನಡೆಸುವವರಿದ್ದಾರೆ. ಹಾಗೆ ಸಿನಿಮಾ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತ, ಈ ಬಗ್ಗೆ ಬರೆಯುವ ಪತ್ರಿಕೋದ್ಯಮಿಗಳಿದ್ದಾರೆ. ಹಾಗೆ ಚಿತ್ರನಟರಾಗುವ ಮೆಟ್ಟಿಲಾಗಿ ಮಾಧ್ಯಮವನ್ನು ಬಳಸಿಕೊಳ್ಳುವವರಿದ್ದಾರೆ. ಒಂದು ಬದುಕುವ ದಾರಿಯಾಗಿ ಯಾವ ಕೆಲಸ ಮಾಡುವುದು ತಪ್ಪಲ್ಲ. ಆದರೆ ತಮ್ಮ ಬದುಕುವ ದಾರಿಯಲ್ಲಿ ಮುಂದುವರಿಯಲು ಪತ್ರಿಕೋದ್ಯಮವನ್ನು ಬಳಸಿಕೊಳ್ಳುವುದು ತಪ್ಪು.

ಇದನ್ನೆಲ್ಲ ಯಾಕೆ ಹೇಳುತ್ತಿದ್ದೆನೆಂದರೆ ಪ್ರಾಮಾಣಿಕತೆಯ ಬಗ್ಗೆ ಮಾತನಾಡುತ್ತಿರುವುದರಿಂದ. ನಮ್ಮ ಆಲೋಚನೆಯಲ್ಲಿ ಪ್ರಾಮಾಣಿಕತೆ ಬರಬೇಕೆಂದರೆ ನಮ್ಮ ಸ್ವಂತ ಹಿತಾಸಕ್ತಿ ಇರಕೂಡದು. ನಮ್ಮ ಸ್ಚಂತ ಹಿತಾಸಕ್ತಿ ಇರಕೂಡದು. ಯಾವುದೇ ವಿಚಾರ ಅಥವಾ ಘಟನೆಯಲ್ಲಿ ಅದನ್ನು ವರದಿ ಮಾಡುವವರ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರ ಪಾಲುದಾರಿಕೆ, ಸಹಭಾಗಿತ್ವ ಇರಕೂಡದು. ಈಗ ಬಾರ್ ನಡೆಸುವ ವ್ಯಕ್ತಿ ವರದಿಗಾರನಾಗಿದ್ದರೆ, ಆ ವಿಚಾರ ಬಂದಾಗ ಆತ ಪ್ರಾಮಾಣಿಕ ನಿಲುಮೆ ತೆಗೆದುಕೊಳ್ಳುವುದು ಸಾಧ್ಯವೆ ? ಗಣಿ ಮಾಲಿಕನಾದ ಒಬ್ಬ ವರದಿಗಾರ, ಈ ಬಗ್ಗೆ ಎಷ್ಟರ ಮಟ್ಟಿಗೆ ಪ್ರಾಮಾಣಿಕ ನಿಲುವನ್ನು ಪ್ರದರ್ಶಿಸಬಲ್ಲ ? ಇದರ ಜೊತೆಗೆ ಮಾಧ್ಯಮದ ಆಡಳಿತ ವರ್ಗ ಕೂಡ ಒಂದಲ್ಲ ಒಂದು ಗುಂಪು, ರಾಜಕೀಯ ಪಕ್ಷಗಳ ಜೊತೆ ತನ್ನನ್ನು ಗುರುತಿಸಿಕೊಳ್ಳುತ್ತಿದೆ.

ನೈತಿಕತೆಯ ಸೂಕ್ಷ್ಮವನ್ನು ಮಾಧ್ಯಮ ಅರ್ಥ ಮಾಡಿಕೊಳ್ಳಬೇಕು. ಮಾಧ್ಯಮದಲ್ಲಿ ಕೆಲಸ ಮಾಡುವವರು ಅರ್ಥ ಮಾಡಿಕೊಳ್ಳಬೇಕು. ಆದರೆ ಇಂದು ಮಾಧ್ಯಮ ಜಗತ್ತೂ ಕೂಡ ಸಂಪೂರ‍್ಣವಾಗಿ ಒಂದು ಉದ್ಯಮದಂತೆ ಕೆಲಸ ಮಾಡುತ್ತಿದೆ. ಯಾವುದು ಉದ್ಯಮವಾಗುತ್ತದೆಯೋ ಅಲ್ಲ ಲಾಭ ನಷ್ಟ ಮಾತ್ರ ಗಣನೆಗೆ ಬರುತ್ತದೆ. ಇಲ್ಲಿಯೂ ಅಷ್ಟೇ ಲಾಭ ನಷ್ಟವೇ ಪರಮ. ಸಾರ್ವಜನಿಕ ಹಿತಾಸಕ್ತಿ, ಬಹುಜನ ಹಿತಾಯ ಎಂಬ ಮಾತುಗಳು ಅರ್ಥ ಕಳೆದುಕೊಳ್ಳುತ್ತಿವೆ. ಇದರಿಂದ ಪತ್ರಿಕೋದ್ಯಮದ ನೈತಿಕತೆಯ ನೆಲಗಟ್ಟು ಶಿಥಿಲಗೊಳ್ಳುತ್ತಿದೆ. ಸಮಾಜದ ಫೋರ‍್ಥ್ ಎಸ್ಟೇಟ್, ರಿಯಲ್ ಎಸ್ಟೇಟ್ ಎಜೆಂಟರುಗಳ ತಾಣವಾಗುತ್ತಿದೆ.
***

ನಾವು ಪತ್ರಿಕೋದ್ಯಮಿಗಳೆಂದರೆ, ದೇವ ಲೋಕದಿಂದ ನೇರವಾಗಿ ಇಳಿದು ಬಂದವರಲ್ಲ. ನಾವೂ ಈ ಸಮಾಜದ ಭಾಗ. ನಾವು ಈ ಸಮಾಜದ ಒಳಗೆ ಇದ್ದೂ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡುತ್ತಿರುತ್ತೇವೆ. ಒಳಗೆ ಇದ್ದು ಹೊರಗಿನವರಾಗಿ ನೋಡುವುದಿದೆಯಲ್ಲ, ಅದಕ್ಕೆ ಸಂತನ ಮನಸ್ಸು ಬೇಕು. ಹೋರಾಟಗಾರನ ಕೆಚ್ಚೆದೆ ಬೇಕು, ಸತ್ಯ ನಿಷ್ಟೆ ಬೇಕು, ಪ್ರಾಮಾಣಿಕತೆ ಬೇಕು. ಇದೆಲ್ಲ ಇದ್ದೂ ನಮಗೆ ನಾವು ಹೆದರುತ್ತಿರಬೇಕು. ನಮ್ಮನ್ನೇ ನಾವು ಲೇವಡಿ ಮಾಡಿಕೊಳ್ಳುವ ಮನಸ್ಥಿತಿ ಬೇಕು. ಒಳಗೆ ಇದ್ದೂ ಹೊರಗಿನವರಾಗುವುದು ಸಣ್ಣ ಕೆಲಸ ಅಲ್ಲ. ನಾವು ಒಳಗೆ ಇದ್ದೂ ಒಳಗಿನವರಾಗುವ ಅಪಾಯವೇ ಹೆಚ್ಚು. ಹೀಗಾಗಿಯೇ ನಾವು ರಾಜಕೀಯ ವರದಿ ಮಾಡುವವರು ರಾಜಕಾರಣಿಗಳಾಗಿ ಬಿಡುತ್ತೇವೆ. ಯಾರ ಯಾರ ಪರವಾಗಿ ಕೆಲಸ ಮಾಡಲು ಪ್ರಾರಂಭಿಸಿಬಿಡುತ್ತೇವೆ.

ಇಷ್ಟಕ್ಕೆ ನಾವು ಹತಾಶರಾಗಬೇಕಾಗಿಲ್ಲ. ಇವೆಲ್ಲವುದರ ಜೊತೆಗೆ ಪತ್ರಿಕೋದ್ಯಮ ಇಂದಿಗೂ ಜನರ ನಂಬಿಕೆಯನ್ನು ಉಳಿಸಿಕೊಂಡಿದೆ. ಭ್ರಷ್ಟರಾಗದ ಪ್ರಾಮಾಣಿಕ ಪತ್ರಿಕೋದ್ಯಮಿಗಳು ನಮ್ಮ ನಡುವೆ ಇದ್ದಾರೆ. ಇದರಿಂದಾಗಿಯೇ ಪತ್ರಿಕೋದ್ಯಮ ನಮ್ಮಲ್ಲಿ ಹೊಸ ಸಮಾಜದ ಕನಸನ್ನು ಮೂಡಿಸುತ್ತಲೇ ಇದೆ.
ಭಟ್ಟರು ಸಮಯ ಚಾನಲ್ ತೊರೆಯುವುದು ನಿಶ್ಚಿತವಾದರೆ, ಅದಕ್ಕೆ ಕಾರಣಗಳನ್ನು ಭಟ್ಟರ ಮೇಲಿನ ಮಾತುಗಳಲ್ಲೇ ಹುಡುಕಬಹುದೇನೋ?
0 komentar

Blog Archive