ದಿ ಹಿಂದೂ ಪತ್ರಿಕೆ ತನ್ನ ಎದುರಾಳಿ ಪತ್ರಿಕೆಗಳನ್ನು ಮಣಿಸಲು ವಿನೂತನ ಮಾದರಿಯನ್ನು ಅನುಸರಿಸುವಂತೆ ಕಾಣುತ್ತಿದೆ. ದಿನಾಂಕ ಜು.೨೦ ರ ಪತ್ರಿಕೆಎಎಯ op-ed ಪುಟ ನೋಡಿದವರಿಗೆ ಒಂದು ಅಚ್ಚರಿ ಕಾದಿತ್ತು. ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ದಿನಾಂಕ ಜೂ.೨೬ ರಂದು ಪ್ರಕಟಿಸಿದ್ದ exclusive ವರದಿಯೊಂದು ಸೃಷ್ಟಿಸಿದ ಅವಾಂತರಗಳನ್ನು, ಪತ್ರಿಕೆ ಮರೆತ ಜರ್ನಲಿಸ್ಟಿಕ್ ಎಥಿಕ್ಸ್ ನ್ನು, ವಿಷಯ ಪರಿಣತರನ್ನು misquote ಮಾಡಿದ್ದನ್ನು  ಬಯಲು ಮಾಡಿತು.

ಮತ್ತೊಂದು ಮಾಧ್ಯಮ ಸಂಸ್ಥೆಯ ಹೆಸರನ್ನೂ ನಮೂದಿಸಲು ಹಿಂಜರಿಯುವ ಪರಿಪಾಠ ಮಾಧ್ಯಮ ಕ್ಷೇತ್ರದಲ್ಲಿ ಸಾಮಾನ್ಯವಾಗಿರುವ ಈ ಹೊತ್ತಿನಲ್ಲಿ, ಇಂತಹದೊಂದು ಬೆಳವಣಿಗೆ ಕುತೂಹಲಕಾರಿ. ಲೇಖನದ ಕೊನೆಯಲ್ಲಿ ದಿ ಹಿಂದೂ ಪ್ರಕಟಿಸುತ್ತದೆ - ದಿ ಹಿಂದೂ ಉತ್ತರ ಭಾರತದಲ್ಲಿ ಹಿಂದೂಸ್ಥಾನ ಟೈಮ್ಸ್ ಜೊತೆ ಪೈಪೋಟಿ ನಡೆಸುತ್ತಿದೆ. ಈ ಅಡಿ ಟಿಪ್ಪಣಿ ದಿ ಹಿಂದೂ ಪತ್ರಿಕೆ  ಪ್ರಸ್ತುತ ಲೇಖನ ಪ್ರಕಟಿಸಿದ್ದುದರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.

ಆದರೆ ಎರಡು ಪತ್ರಿಕೆಗಳ ನಡುವಿನ ಪೈಪೋಟಿ ಆಚೆಗೂ ಈ ಬೆಳವಣಿಗೆ ಮಹತ್ವ ಪಡೆದಿದೆ.

DNA  ಪತ್ರಿಕೆ ಇಂದೋರ್‌ನಲ್ಲಿ ತನ್ನ ಆವೃತ್ತಿಯನ್ನು ಲಾಂಚ್ ಮಾಡುವ ದಿನ (ಜೂ ೨೬) ಹಿಂದೂಸ್ಥಾನ್ ಟೈಮ್ಸ್ ಒಂದು exclusive ಸುದ್ದಿಯನ್ನು ಪ್ರಕಟಿಸಲೇಬೇಕು ಎಂಬ ಹಟದೊಂದಿಗೆ ಹಸಿಹಸಿ ವರದಿಯನ್ನು ಮುಖಪುಟದಲ್ಲಿ ಟಾಪ್ ಆಂಕರ್ ಆಗಿ ಪ್ರಕಟಿಸಿತ್ತು. ಇಂದೋರ್ ನ ಆಸ್ಪತ್ರೆಯಲ್ಲಿ ನೂರಾರು ಹೆಣ್ಣು ಮಕ್ಕಳು ಹುಟ್ಟುವ ಕೆಲವೇ ಹೊತ್ತಿನಲ್ಲಿ  ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಅವರನ್ನು ಗಂಡು ಮಕ್ಕಳಾಗಿ ಪರಿವರ್ತನೆ ಮಾಡಲಾಗಿದೆ ಎಂದು ಪತ್ರಿಕೆ ವರದಿ ಮಾಡಿತ್ತು.

ವೈಜ್ಞಾನಿಕವಾಗಿ ಇದುವರೆಗೆ ಜಗತ್ತಿನ ಯಾವ ಮೂಲೆಯಲ್ಲೂ ಸಾಧ್ಯವಾಗದೇ ಇದ್ದದನ್ನು ಪತ್ರಿಕೆ ವರದಿ ಮಾಡಿ ಎಲ್ಲರಿಗೂ ದಂಗುಬಡಿಸಿತು. ಪ್ರಧಾನ ಮಂತ್ರಿ ಕಾರ್ಯಾಲಯವೂ ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿ ಸ್ಥಳೀಯ ಸರಕಾರಕ್ಕೆ ಪತ್ರ ಬರೆಯಿತು.

ಹೆಣ್ಣು ಮಕ್ಕಳನ್ನು ಗಂಡಾಗಿ ಪರಿವರ್ತಿಸುವ ಸಂಚು ಆಘಾತಕಾರಿ ಸುದ್ದಿಯೇ ಸರಿ. ಆ ಸುದ್ದಿ ಪ್ರಕಟವಾದಂದಿನಿಂದ ದಿ ಹಿಂದೂ ಅದರ ಹಿಂದೆ ಬಿದ್ದಿದೆ. ವೈಜ್ಞಾನಿಕವಾಗಿ ಇದು ಸಾಧ್ಯವೇ ಎಂದು ನುರಿತ ತಜ್ಞರನ್ನು ಮಾತನಾಡಿಸಿದೆ. ಹಿಂದೂಸ್ಥಾನ್ ಟೈಮ್ಸ್ ತನ್ನ ವರದಿಗಾಗಿ ಸಂಪರ್ಕಿಸಿದ ತಜ್ಞರನ್ನೂ ಮಾತನಾಡಿಸಿದೆ. ಅಷ್ಟೇ ಅಲ್ಲ HTಯ ಇಂದೋರ್ ಆವೃತ್ತಿ ಮುಖ್ಯಸ್ಥರನ್ನೂ ಸಂಪರ್ಕಿಸಿ ಅವರ ಅಭಿಪ್ರಾಯವನ್ನೂ ತೆಗೆದುಕೊಂಡಿದೆ.

ನವಜಾತ ಶಿಶುಗಳ ಅಂಗ ನಿರ್ಧರಿಸುವ ಅಂಗಗಳು ಸಂಪೂರ್ಣವಾಗಿ ಬೆಳೆಯದೇ ಇದ್ದ ಸಂದರ್ಭದಲ್ಲಿ, ದೇಹದ ಇತರ ಲಕ್ಷಣಗಳನ್ನು ಪರಿಶೀಲಿಸಿ, ಸೂಕ್ತ ಶಸ್ತ್ರಚಿಕಿತ್ಸೆ ನಡೆಸುವ ಪರಿಪಾಠವನ್ನೇ HT ತಪ್ಪಾಗಿ ವರದಿ ಮಾಡಿತ್ತು.
ತಜ್ಞರ ಹೇಳಿಕೆಗಳು ತಿರುಚಿ ಸುದ್ದಿಯನ್ನು sensational ಮಾಡುವ ಪ್ರಯತ್ನ ನಡೆದಿತ್ತು ಎಂಬುದನ್ನು ದಿ ಹಿಂದೂ ಸವಿವರವಾಗಿ ನಿರೂಪಿಸಿದೆ.

ಕನ್ನಡದಲ್ಲಿ ಇದುವರೆಗೆ ಹೀಗೆ ಒಂದು ಪತ್ರಿಕೆ ತನ್ನ ಎದುರಾಳಿಯ ತನಿಖಾ ವರದಿಯನ್ನು ವಿಶ್ಲೇಷಿಸಿ ವರದಿ ಪ್ರಕಟಿಸಿದ ಉದಾಹರಣೆ ಇಲ್ಲ. ಅನೇಕ ಸಂದರ್ಭಗಳಲ್ಲಿ ಆ ಪತ್ರಿಕೆ ಬರೆದಿರುವುದು ಸುಳ್ಳು, ಆ ಚಾನೆಲ್ ಅವಸರಕ್ಕೆ ಏನೇನೋ ವರದಿ ಮಾಡಿದೆ ಎಂದು ಮಾತನಾಡಿಕೊಳ್ಳುವ ಪತ್ರಕರ್ತರು, ಸಂಪಾದಕರು ಆ ತಪ್ಪನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಲೇ ಇಲ್ಲ. ಇನ್ನು ಮುಂದೆ ಮಾಡುತ್ತಾರಾ?
0 komentar

Blog Archive