Vijay Sankeshwar new paper name VIJAYAVANI. Vani happens to be Sankeshwar's daughet-in-law. He purchased it from Venkateshmurthy,Tumkur for Rs.35 lakhs.
ಇವು ವಿಶ್ವೇಶ್ವರ ಭಟ್ಟರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸಾಲುಗಳು.

ನಿಜ, ಸಂಕೇಶ್ವರರ ಹೊಸ ಪತ್ರಿಕೆಯ ಹೆಸರು ವಿಜಯ ವಾಣಿ. ಇದೇ ಟೈಟಲ್ ಮೇಲೆ ಸಂಕೇಶ್ವರರು ಕಣ್ಣಿಟ್ಟು ಹಲವು ವರ್ಷಗಳೇ ಆಗಿತ್ತು. ಹಿಂದೆ ಉಷಾಕಿರಣವನ್ನು ಆರಂಭಿಸುವುದಕ್ಕೂ ಮುನ್ನ ಅವರ ಮುಂದಿದ್ದ ಹೆಸರೂ ಇದೇ. ಇದು ೧೯೬೭ರಲ್ಲಿ ಎಚ್.ಆರ್.ಗುಂಡೂರಾವ್ ಎಂಬುವವರ ಹೆಸರಲ್ಲಿ ರಿಜಿಸ್ಟರ್ ಆಗಿದ್ದ ಟೈಟಲ್. ಇದನ್ನು ನಡೆಸುತ್ತಿದ್ದವರು ವೆಂಕಟೇಶಮೂರ್ತಿ ಎಂಬ ಹಿರಿಯ ಪತ್ರಕರ್ತರು. ಸಂಕೇಶ್ವರರಿಗೆ ಸಂಬಂಧಿಸಿದವರು ಟೈಟಲ್ ಕೇಳಿದಾಗ ಅವರು ನಯವಾಗಿಯೇ ನಿರಾಕರಿಸಿದ್ದರು. ಹೀಗಾಗಿ ಸಂಕೇಶ್ವರರು ಉಷಾಕಿರಣ ಎಂಬ ಹೆಸರಿನಲ್ಲಿ ಪತ್ರಿಕೆ ಆರಂಭಿಸಿದ್ದರು.

ಈ ಬಾರಿ ಹೊಸ ಪತ್ರಿಕೆ ಆರಂಭಿಸುವಾಗ ಸಂಕೇಶ್ವರರು ಆನಂದ ಕರ್ನಾಟಕ ಟೈಟಲ್‌ನೊಂದಿಗೆ ಪತ್ರಿಕೆ ಆರಂಭಿಸಬಹುದು ಎಂಬ ಗುಸುಗುಸು ಕೇಳಿಬಂದಿತ್ತು. ಆ ಕುರಿತು ಆನಂದ ಕರ್ನಾಟಕದ ಸಂಪಾದಕರಾದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಸಂಪಾದಕೀಯಕ್ಕೆ ನೀಡಿದ್ದ ಸ್ಪಷ್ಟನೆಯನ್ನು ನೀವು ಗಮನಿಸಿರಬಹುದು.

ಈ ಬಾರಿಯೂ ತಮ್ಮ ಪತ್ರಿಕೆಯ ಹೆಸರಿನಲ್ಲಿ ವಿಜಯ ಎಂಬ ಹೆಸರು ಇರಲೇಬೇಕು ಎಂದು ಟೈಟಲ್‌ಗಳನ್ನು ಹುಡುಕಾಡಿದಾಗ ಮತ್ತೆ ತೊಡರಿಕೊಂಡಿದ್ದು ವಿಜಯವಾಣಿಯೇ. ಈ ಬಾರಿಯೂ ಹಲವು ವಿಘ್ನಗಳಿದ್ದವು. ಟೈಟಲ್ ಕೊಡಬೇಕೆ ಬೇಡವೇ ಎಂಬ ವಿಷಯದ ಕುರಿತು ವೆಂಕಟೇಶಮೂರ್ತಿಯವರ ಕುಟುಂಬದಲ್ಲೇ ಹಲವು ಬಗೆಯ ಅಭಿಪ್ರಾಯಗಳಿದ್ದವು. ಕಡೆಗೂ ಟೈಟಲ್ ಸಂಕೇಶ್ವರರಿಗೆ ದೊರಕಿದೆ. ಹೀಗಾಗಿ ವಿಜಯವಾಣಿಯೇ ಸಂಕೇಶ್ವರರ ಹೊಸ ಪತ್ರಿಕೆಯಾಗಲಿದೆ.

ಅಂದ ಹಾಗೆ ವಿಜಯವಾಣಿಯ ಆರಂಭಕ್ಕೂ ಒಂದು ಮುಹೂರ್ತ ನಿಗದಿಯಾಗಿರುವ ಬಗ್ಗೆ ವರ್ತಮಾನವಿದೆ. ನಮಗೆ ಗೊತ್ತಾದ ಪ್ರಕಾರ ಹನ್ನೊಂದು ಹನ್ನೊಂದು ಹನ್ನೊಂದರಂದು ಪತ್ರಿಕೆಯ ಮೊದಲ ಪ್ರತಿ ಹೊರಗೆ ಬರಲಿದೆ. ಇದೊಂದು ವಿಶೇಷ ದಿನ. ಸಾವಿರ ವರ್ಷಕ್ಕೆ ಒಮ್ಮೆ ೧೧-೧೧-೧೧ ಅಂಕಿಗಳ ಡೇಟು ಬರುತ್ತದೆ. ಹೀಗಾಗಿ ಈ ವಿಶೇಷ ದಿನದಂದು ಪತ್ರಿಕೆ ಆರಂಭಿಸುವ ಆಲೋಚನೆ ಸಂಕೇಶ್ವರರಿಗಿದೆ ಎಂಬ ಮಾಹಿತಿ ಇದೆ.

ಈಗಾಗಲೇ ನಿಯೋಜಿತ ಪ್ರಧಾನ ಸಂಪಾದಕ ತಿಮ್ಮಪ್ಪ ಭಟ್ಟರು ಬೆಂಗಳೂರಿನ ವಿಆರ್‌ಎಲ್ ಕಚೇರಿಯಿಂದಲೇ ಕೆಲಸ ಕಾರ್ಯ ಆರಂಭಿಸಿದ್ದಾರೆ. ಒಟ್ಟು ಹತ್ತು ಆವೃತ್ತಿಗಳು ಆರಂಭವಾಗುವುದೂ ಬಹುತೇಕ ಖಚಿತವೇ. ಆದರೆ ಗಂಗಾವತಿ ಆವೃತ್ತಿಯ ಬದಲು ಕೊಪ್ಪಳ, ಶಿವಮೊಗ್ಗದ ಬದಲು ದಾವಣಗೆರೆ ಆವೃತ್ತಿ ಆರಂಭಿಸಲು ಯೋಜನೆಯಲ್ಲಿ ಸಂಕೇಶ್ವರರು ಇದ್ದಾರೆ ಎಂಬ ಮಾಹಿತಿಯಿದೆ.

ವಿಜಯ ಸಂಕೇಶ್ವರ್ ತಮ್ಮ ಹೊಸ ಪತ್ರಿಕೆಯ ಮೂಲಕ ಕನ್ನಡ ಪತ್ರಿಕಾ ರಂಗದಲ್ಲಿ ಇನ್ನೊಂದು ಸುತ್ತಿನ ದರ ಸಮರ ಆರಂಭಿಸುವುದು ಸರಿಯೇ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಒಂದು ಪೋಲ್ ನಡೆಸಿದ್ದು ನಿಮಗೆ ಗೊತ್ತು. ಇದರ ಫಲಿತಾಂಶ ಅಚ್ಚರಿಯದು. ಸರಿ ಎಂದು ಹೇಳುವವರ ಸಂಖ್ಯೆ ಶೇ.೭೦ರಷ್ಟು. ಶೇ.೨೬ರಷ್ಟು ಮಂದಿ ಮಾತ್ರ ಇದು ಸರಿಯಲ್ಲ ಎಂದಿದ್ದಾರೆ. ಶೇ.೪ರಷ್ಟು ಮಂದಿ ಗೊತ್ತಿಲ್ಲ ಎಂದಿದ್ದಾರೆ.

ಉಳಿದಿರುವ ಪ್ರಶ್ನೆ ಒಂದೇ. ವಿಜಯವಾಣಿಯ ಮುಖಬೆಲೆ ಎಷ್ಟಿರುತ್ತದೆ. ಈ ಪತ್ರಿಕೆ ನಡೆಸುವ ಬೆಲೆಸಮರಕ್ಕೆ ಯಾರ‍್ಯಾರು ಬಲಿಯಾಗುತ್ತಾರೆ? ಕಾದು ನೋಡೋಣ.
0 komentar

Blog Archive