ಜಟಕಾ ಬಂಡಿ ಒಂಥರಾ ಕೌಟುಂಬಿಕ ಕೋರ್ಟು ಇದ್ದಂತೆ. ಅದೂ ಕೂಡಾ ಫಾಸ್ಟ್ ಟ್ರಾಕ್! ಬೇಗ ಬೇಗ ಡ್ರಾ ಬೇಗ ಬೇಗ ಬಹುಮಾನ. ಮಾಳವಿಕಾ ಮೇಡಂ ಒಂದು ಘಂಟೆಯಲ್ಲಿ ಎಂಥೆಂಥದೊ ಫ್ಯಾಮಿಲಿ ಡಿಸ್ಪ್ಯೂಟ್ ಗಳನ್ನು ನಿವಾರಿಸಿ, ನೀವಳಿಸಿ ಎಸೆದಿದ್ದಾರೆ. ಎಲ್ಲವೂ ಖುಲ್ಲಂ ಖುಲ್ಲಾ. ಕ್ಯಾಮೆರಾ ಎದುರೇ ಪಂಚಾಯ್ತಿ. ಬದುಕು ಜಟಕಾ ಬಂಡಿಯಲ್ಲಿ ನಿನ್ನೆ ಒಂದು ಕೇಸು. ಕೇಸು ಜಡಿದಾಕೆ ಒಬ್ಬ ಹೆಣ್ಣುಮಗಳು. ಆಕೆಗೂ ಆತನ ಗಂಡನಿಗೂ ಮನಸ್ತಾಪ. ಇಬ್ಬರು ಗಂಡುಮಕ್ಕಳಿದ್ದಾರೆ. ಮಕ್ಕಳಿಬ್ಬರೂ ತಂದೆಯ ಜತೆ ಇದ್ದಾರೆ. ಬೇರೆಬೇರೆಯಾಗಿರುವ ನಮ್ಮನ್ನು ಮತ್ತೆ ಸೇರಿಸಿ ಅಂತ ಆಕೆ ಬಂದಿದ್ದಳೆನಿಸುತ್ತದೆ.
ಮಾಳವಿಕಾ ಮೇಡಂ ಇಬ್ಬರನ್ನೂ ಮಾತಾಡಿಸತೊಡಗಿದರು. ಮೇಡಂ ಒಂಥರಾ ಅವರೇ ಲಾಯರ್, ಅವರೇ ಜಡ್ಜ್, ಅವರೇ ಲೀಗಲ್ ಎಕ್ಸ್‌ಪರ್ಟ್ ಇದ್ದಂತೆ. ಅವರು ಪಕ್ಕಾ ಹಳ್ಳಿ ಪಂಚಾಯ್ತಿದಾರರಂತೆ ಕಾಣಿಸುತ್ತಾರೆ. ಒಂದೊಂದು ಸರ್ತಿ ಅವರು ದಾರ್ಶನಿಕರ ಶೈಲಿಯಲ್ಲಿ, ತತ್ತ್ವಜ್ಞಾನಿಗಳ ಶೈಲಿಯಲ್ಲಿ ಮಾತಾಡೋದು ಉಂಟು. ಹೀಗಾಗಿ ಅವರ ಬಳಿ ಸಮಸ್ಯೆ ತೆಗೆದುಕೊಂಡು ಬರುವವರಿಗೆ ಅವರು ಸಾಕ್ಷಾತ್ ಜಗನ್ಮಾತೆಯ ಹಾಗೆ ಕಾಣಿಸಿದರೂ ಆಶ್ಚರ್ಯವಿಲ್ಲ.
ಮುನಿಸಿಕೊಂಡು ಕುಳಿತ ಗಂಡ-ಹೆಂಡತಿ ತಮ್ಮ ನಡುವೆ ಏನು ಸಮಸ್ಯೆ ಅಂತ ಹೇಳದೇ ಹೋದಾಗ ಮಾಳವಿಕಾ ಮೇಂಡಂಗೆ ರೇಗಿಹೋಯಿತು. ಏನು ಸಮಸ್ಯೆ ಹೇಳಿ ಅಂದ್ರೆ ಇಬ್ಬರೂ ಬಾಯಿಬಿಡೊಲ್ಲರು. ಗಂಡಹೆಂಡಿರ ನಡುವೆ ತೀರಾ ಖಾಸಗಿಯಾದ ಬೇಕಾದಷ್ಟು ವಿಷಯಗಳಿರುತ್ತವೆ. ಎಲ್ಲವನ್ನೂ ಎಲ್ಲರೆದುರೂ ಹೇಳೋದಕ್ಕೆ ಸಾಧ್ಯನಾ? ಆದ್ರೆ ಮೇಡಂ ಕೋರ್ಟಿನಲ್ಲಿ ಎಂಥ ಮುಚ್ಚು ಮರೆ? ಮೇಡಂ ಬಲವಂತ ಮಾಡಿದಾಗ ಕಡೆಗೂ ಆತ ಬಾಯಿ ಬಿಟ್ಟ. ಅವತ್ತೊಂದಿನ ಇವಳು ರಾತ್ರಿ ಹತ್ತು ಗಂಟೆಗೆ ಹೋದೋಳು ಬೆಳಿಗ್ಗೆನೇ ಮನೆಗೆ ಬಂದಿದ್ದಳು. ಯಾವ ಗಂಡಸು ಸಹಿಸಿಕೊಳ್ತಾನೆ ಹೇಳಿ ಮೇಡಂ ಎಂದು ಕೇಳಿದ. ಅದಕ್ಕೆ ನಿನ್ನ ಬಳಿ ಎವಿಡೆನ್ಸ್ ಇದೆಯಾ ಅಂತ ಕೇಳಿದರು ಜಡ್ಜ್ ಮೇಡಂ. ಹೆಂಡತಿ ಮಾತ್ರ ನಾನು ಮನೆಲೇ ಇದ್ದೆ, ಈತ ಸುಳ್ಳು ಹೇಳುತ್ತಿದ್ದಾನೆ ಎಂದಳು.
ಮಾತು ಹೀಗೆ ಮುಂದುವರೆಯುತ್ತಿದ್ದಂತೆ ಬದುಕು ಜಟಕಾ ಬಂಡಿಯಲ್ಲಿ ಮಾಮೂಲಿಯಾಗಿ ನಡೆಯುವಂತೆ ಆತ ಆಕೆಯ ಮೇಲೆ ಎರಡು ಮೂರು ಬಾರಿ ಕೈ ಮಾಡಲು ಯತ್ನಿಸಿದ. ಜಡ್ಜ್ ಮೇಂಡಂ ಕೂತಲ್ಲಿಂದ ಕದಲಲೇ ಇಲ್ಲ. ಸಂಸ್ಕಾರ ಇಲ್ಲದ ಜನ ಹೊಡೆದಾಡುತ್ತಾರೆ. ಮೇಡಂ ಆದ್ರೂ ಏನು ಮಾಡುತ್ತಾರೆ ಪಾಪ. ಹೊಡೆಯೋದು ಗಿಡಿಯೋದು ಎಲ್ಲ ಬಿಟ್ಟುಬಿಡ್ರಿ ಎಂದು ಕೂತಲ್ಲಿಂದಲೇ ಒಂದು ಆವಾಜ್ ಹಾಕಿದರು. ಆಹಾ, ಏನು ಘರ್ಜನೆ, ಎಂಥಾ ಧ್ವನಿ.
ಹೀಗೇ ಚರ್ಚೆ ನಡೀತಾ ಇದ್ದಂತೆ ಗಂಡ-ಹೆಂಡತಿ ಇಬ್ಬರ ಬಿಪಿ ಏರುತ್ತಲೇ ಹೋಯಿತು. ಅವಳು ಸರಿಯಿಲ್ಲ ಅಂತ ಇವನು, ಇವಳು ಸರಿಯಿಲ್ಲ ಅಂತ ಅವನು. ಇಬ್ಬರು ಮಕ್ಕಳು ಪಿಳಿಪಿಳಿ ಕಣ್ಣುಬಿಟ್ಟುಕೊಂಡು ಕೂತಿದ್ದವು. ಕಡೆಗೆ ವಾಗ್ವಾದ ತಾರಕಕ್ಕೆ ಹೋಗುತ್ತಿದ್ದಂತೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಒಬ್ಬಾಕೆ ಬಂದು ಅವನ ಮೇಲೆ ಫೇಡ್ ಫೇಡ್ ಎಂದು ಹೊಡೆಯಲಾರಂಭಿಸಿದಳು. ಆತನ ಹೆಂಡತಿ ಸುಮ್ಮನಿದ್ದಾಳೆಯೇ, ತಾನೂ ಒಂದು ನಾಲ್ಕು ಏಟು ಕ್ಯಾಮೆರಾ ಎದುರು ಹಾಕೇ ಬಿಡೋಣ ಅಂತ ಅವನ ಮೇಲೆ ಏರಿ ಹೋದಳು. ಇಬ್ಬರು ಹೆಂಗಸರು ದಾಳಿ ಮಾಡುವಾಗ ಈತ ಸುಮ್ಮನಿದ್ದಾನೆಯೇ? ಒಬ್ಬಳನ್ನು ಎಳೆದು ಬಿಸಾಕಿ ಇನ್ನೊಬ್ಬಳಿಗೆ ಗುದ್ದಿದ. ಪರಿಣಾಮವಾಗಿ ಗುದ್ದಿಸಿಕೊಂಡ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಳು. ಜಗಳ ಒಂದು ಹಂತ ತಲುಪುವವರೆಗೆ ಕಾಯ್ದು, ಸೂಪರ್ ವಿಶುಯಲ್‌ಗಳು ಸಿಕ್ಕಾದ ಮೇಲೆ ಜಟಕಾಬಂಡಿಯ ಸಹಾಯಕ ಸಿಬ್ಬಂದಿ (ಬೌನ್ಸರ್‌ಗಳು ಅಂತ ಕರೆಯುವುದು ಅಪಚಾರ.) ಬಂದು ಜಗಳ ಬಿಡಿಸಿದರು.
ನಂತರ ಜಟಕಾ ಬಂಡಿಯವರು ಪೊಲೀಸರಿಗೆ ಕರೆ ಮಾಡುತ್ತಾರೆ. ಪೊಲೀಸರು ಬಂದು ಇಬ್ಬರ ಕಡೆಯವರನ್ನೂ ಸ್ಥಳದಿಂದ ಹೊರಗೆ ಕಳಿಸುತ್ತಾರೆ. ಥೇಟು ಎಲ್ಲ ಸಿನಿಮಾ ಸೀನುಗಳ ಹಾಗೆ. ಎಂಥ ಅದ್ಭುತ ಶೋ. ಎಂಥ ಅದ್ಭುತ ಎಡಿಟಿಂಗ್. ಅದರ ಕ್ಲೈಮ್ಯಾಕ್ಸ್ ಕೂಡ ಅದ್ಭುತವಾಗಿದೆ. ನಿಧಾನವಾಗಿ ಕೇಳಿ.
ಇವರೆಲ್ಲ ಹೀಗೆ ನಾಯಿನರಿಗಳಂತೆ ಕಾದಾಡುವಾಗ ಅತ್ತ ಜಡ್ಜ್ ಮೇಂಡಂ ಮಾತ್ರ ಕೂತ ಕುರ್ಚಿಯಿಂದ ಏಳಲೇ ಇಲ್ಲ. ಪಾಪ, ಅವರು ಆಘಾತದಿಂದ ಜರ್ಝರಿತರಾಗಿದ್ದರು. ಆಮೇಲೆ ಸುಧಾರಿಸಿಕೊಂಡು ಎದ್ದುನಿಂತು ಒಂದು ಪ್ರವಚನದ ಸ್ವರೂಪದ ಭಾಷಣ ಹೊಡೆದೇ ಬಿಟ್ಟರು. ನೂರಾರು ಜನರು ತಮ್ಮ ಸಮಸ್ಯೆಗಳನ್ನು ಜಟಕಾ ಬಂಡಿಯ ವೇದಿಕೆಯಲ್ಲಿ ಇತ್ಯರ್ಥ ಮಾಡಿಕೊಂಡಿದ್ದಾರಂತೆ. ಎಷ್ಟೋ ಜನರಿಗೆ ನೆಮ್ಮದಿ ಸಿಕ್ಕಿದೆಯಂತೆ. ಆದರೆ ಈಗೀಗ ಬದುಕು ಜಟಕಾ ಬಂಡಿಯಲ್ಲಿ ಸಮಸ್ಯೆ ಹಿಡಿದುಕೊಂಡು ಬರ್ತಾ ಇರೋರೆಲ್ಲ ಪರಸ್ಪರ ಹೊಡೆದಾಡಿ, ಕ್ಯಾಮೆರಾ ಎದುರು ಸೀನ್ ಕ್ರಿಯೇಟ್ ಮಾಡಲು ಬರುವವರು. ಹೀಗಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಹೋಗೋದೇ ಅವರಿಗೆ ಬೇಡವಾಗಿದೆಯಂತೆ. ಇನ್ನು ಮುಂದೆ ಈ ಶೋ ಮಾಡಲಾರೆ ಎಂದು ಅವರು ಮೈಕು ಕಿತ್ತುಹಾಕಿ ಹೊರಟೇ ಬಿಟ್ಟರು. ಜಟಕಾ ಬಂಡಿಗೇ ಅವರು ಡೈವೋರ್ಸ್ ಕೊಟ್ಟುಬಿಟ್ಟರು.
ಹಾಗೆ ಅವರು ಹೋಗುವಾಗ ಜಟಕಾಬಂಡಿಯ ಕ್ಯಾಮೆರಾಗಳು ಹಿಂಬಾಲಿಸುತ್ತವೆ. ಕ್ಯಾಮೆರಾ ಇದ್ದ ಮೇಲೆ ಜನರೂ ಇರಬೇಕಲ್ಲ. ಜಟಕಾ ಬಂಡಿಯ ಅಭಿಮಾನಿ ಪ್ರೇಕ್ಷಕರನೇಕರು ಬಂದು ಹೋಗಬೇಡಿ ಮೇಂಡಂ ಎಂದು ಕಾಡಿಬೇಡುವುದೆಲ್ಲ ದಾಖಲಾಗುತ್ತದೆ. ಆದರೆ ಅಪ್‌ಸೆಟ್ ಆಗಿದ್ದ ಮೇಡಂ ಸೀದಾ ಕಾರು ಹತ್ತಿ ಹೊರಟು ಹೋಗುತ್ತಾರೆ.
ಹಾಗಿದ್ದರೆ ಮಾಳವಿಕಾ ಮೇಡಂ ಇನ್ನು ಜಟಕಾ ಬಂಡಿಯಲ್ಲಿ ಕಾಣಿಸಿಕೊಳ್ಳುವುದಿಲ್ಲವಾ? ಅವರಿಗೆ ಬೇಜಾರಾಗಿ ಹೊರಟೇ ಹೋದರಾ? ಹಾಗಿದ್ದರೆ ಅಖಂಡ ಕರ್ನಾಟಕದ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವವರು ಯಾರು? ಅನೈತಿಕ ಸಂಬಂಧಗಳನ್ನು ಬಿಡಿಸಿ, ಗಂಡ-ಹೆಂಡಿರನ್ನು ಒಂದು ಮಾಡುವವರು ಯಾರು?
ತಡೀರಿ, ಅಷ್ಟು ಬೇಜಾರು ಮಾಡ್ಕೋಬೇಡಿ. ಮಾಳವಿಕಾ ಮೇಂಡ ಒಂಥರಾ ಜಗನ್ಮಾತೆಯ ತರಹ. ಭಕ್ತರ ಮೇಲೆ ಸಿಟ್ಟು ಎಷ್ಟು ಕಾಲ ಇಟ್ಟುಕೊಳ್ಳಲು ಸಾಧ್ಯ. ರಾತ್ರಿ ಹರಿಯುವುದರಲ್ಲಿ ಅದು ಬಗೆಹರಿಯುತ್ತದೆ. ಕರ್ನಾಟಕದ ಜನರ ಸಂಸಾರಗಳು ಹಾಳಾಗುವುದನ್ನು ಅವರು ಹೇಗೆ ತಾನೇ ನೋಡಿಕೊಂಡು ಇರಲು ಸಾಧ್ಯ? ಮನೆಮನೆಯಲ್ಲಿ ಜನರು ಹೊಡೆದಾಡಿಕೊಂಡು ಬೇರೆಯಾಗುತ್ತಿರುವಾಗ ಅದನ್ನು ನೋಡಿ ಜಗನ್ಮಾತೆಯ ಕರುಳು ಚುರುಕ್ ಎನ್ನದಿರುತ್ತದೆಯೇ? ಅವರು ಬಂದೇ ಬರುತ್ತಾರೆ, ಭಕ್ತರ ಬೇಡಿಕೆಗೆ ತಥಾಸ್ತು ಅಂದೇ ಅನ್ನುತ್ತಾರೆ.
ಆದ್ರೂ ಕೆಲವರು ಪ್ರಶ್ನೆ ಕೇಳಿಯೇ ಕೇಳುತ್ತಾರೆ. ಅಲ್ರೀ, ಇಂಥ ಕೌನ್ಸಿಲಿಂಗ್‌ಗಳನ್ನು ಯಾಕೆ ಖಾಸಗಿಯಾಗಿ ಮಾಡಬಾರದು? ಯಾಕೆ ಕ್ಯಾಮೆರಾ ಮುಂದೆಯೇ ಮಾಡುತ್ತೀರಿ ಅಂತ ಕೆಲವರು ಕೇಳುತ್ತಾರೆ. ನಮ್ದು ಒಂಥರಾ ಲೈವ್ ಟ್ರೈಯಲ್. ಈ ತರಹದ ವ್ಯವಸ್ಥೆ ಯಾವ ಕೋರ್ಟಿನಲ್ಲಿದೆ ಹೇಳಿ. ಕರ್ನಾಟಕದ ಸಮಸ್ತ ಜನರೆದುರು ನಡೆಯುವ ಕೋರ್ಟಿನ ಬಗ್ಗೆ ನಿಮ್ಮದೇನು ತಕರಾರು ಎಂಬುದು ಜಗನ್ಮಾತೆಯ ಭಕ್ತಗಣದ ಅಭಿಪ್ರಾಯ.
ಚಪ್ಪಲಿಯಲ್ಲಿ ಹೊಡೆದಾಡುವವರೆಗೆ ಯಾಕೆ ಸುಮ್ಮನಿರುತ್ತೀರಿ? ಒಂದುವೇಳೆ ಚಪ್ಪಲಿಯಲ್ಲಿ ಹೊಡೆದಾಡಿಕೊಂಡರೂ ಅದನ್ನು ಯಾಕೆ ಟೆಲಿಕಾಸ್ಟ್ ಮಾಡ್ತೀರಿ, ಎಡಿಟ್ ಮಾಡಬಹುದಲ್ಲ ಎಂಬುದು ಹಲವರ ಪ್ರಶ್ನೆ. ಹೊಡೆದಾಡಿ ಅಂತ ಶೋ ನಡೆಸುವವರು ಹೇಳಿರ್ತಾರಾ? ನಾವು ಪಾರದರ್ಶಕವಾಗಿರಬೇಕು ಅಲ್ಲವೇ? ಅದಕ್ಕೆ ಹೊಡೆದಾಡಿದ್ದನ್ನು ತೋರಿಸುತ್ತಾರೆ. ಅದು ತಪ್ಪೆ ಎಂದು ಕೇಳುತ್ತದೆ ಭಕ್ತಗಣ.
ಬಡವರ ಮನೆಯ ಬಾಧಿತರನ್ನೇ ಕರೆಯುತ್ತೀರಿ. ದೊಡ್ಡವರ ಮನೆಗಳಲ್ಲಿ ಜಗಳಗಳಿರುವುದಿಲ್ಲವಾ? ಅವರಿಗೆ ಯಾಕೆ ಕೌನ್ಸಿಲಿಂಗ್ ಮಾಡೋಲ್ಲ. ಬಡವರು ಮಾತ್ರನಾ ಕಿತ್ತಾಡೋದು ಅಂತ ಕೆಲವರು ಕೇಳುತ್ತಾರೆ. ಬಡವರಾದರೆ ಹೆದರಿಸಿ ಕರೆಸಬಹುದು, ಉಳ್ಳವರನ್ನು ಕರೆಸಲು ಆಗುತ್ತಾ? ಅವರು ಇವರನ್ನೇ ಹೆದರಿಸಿಬಿಡಬಹುದು. ಹೋಗ್ಲಿ ಬಿಡಿ, ನಷ್ಟ ಆಗೋದು ಅವರಿಗೇ ತಾನೇ. ಬಂದು ಸಮಸ್ಯೆ ಬಗೆಹರಿಸಿಕೊಳ್ಳೋದ್ರಿಂದ ಬಡವರ ಸಮಸ್ಯೆಗಳು ಬಗೆಹರಿಯುತ್ತಲ್ಲಾ ಅನ್ನುತ್ತದೆ ಭಕ್ತಗಣ.
ಇದೆಲ್ಲ ಹಾಗಿರಲಿ, ಮೇಡಂ ನಿಜಕ್ಕೂ ಸಿಟ್ಟು ಮಾಡಿಕೊಂಡ್ರಾ? ಅಥವಾ ತಮ್ಮ ಭಕ್ತರನ್ನು ಸಣ್ಣದಾಗಿ ಹೆದರಿಸಲು ಬಿಟ್ಟು ಹೋಗ್ತೀನಿ ಅಂದ್ರಾ? ಒಂದು ವೇಳೆ ಮೇಡಂ ಹೋಗೇ ಬಿಟ್ಟರೆ, ಕಚ್ಚಿಕೊಂಡಿರುವ ಟಿಆರ್‌ಪಿ ಯಾರು ತಂದು ಕೊಡುತ್ತಾರೆ. ಬೇರೊಬ್ಬ ಜಡ್ಜ್ ಎಲ್ಲಿಂದ ಕರೆತರೋದು? ಹೀಗೆಲ್ಲ ಚಾನಲ್‌ನವರು ತಲೆಕೆಡಿಸಿಕೊಂಡಿರಬಹುದು ಅಂದುಕೊಂಡಿದ್ದೀರಾ?
ಜಗತ್ತು ನಿತ್ಯಾನಂದಮಯವಾಗಿದೆ ಅನ್ನೋದು ಅವರಿಗೆ ಗೊತ್ತು. ನಿನ್ನೆ ಆದ ನೋವು-ದುಃಖವನ್ನೆಲ್ಲ ಮರೆತು ಮೇಡಂ ವಾಪಾಸ್ ಬರ್ತಾರೆ ಅಂತಾನೂ ಅವರಿಗೆ ಗೊತ್ತು. ನಿನ್ನೆ ಮೇಂಡಂ ವಾಕ್‌ಔಟ್ ಮಾಡಿದ್ರಿಂದ ಜಟಕಾ ಬಂಡಿಗೆ ಇನ್ನಷ್ಟು ಟಿಆರ್‌ಪಿ ಹೆಚ್ಚಾಗಿರುತ್ತೆ ಅನ್ನೋದೂ ಸಹ ಗೊತ್ತು. ಈ ತರಹ ವಾಕ್ ಔಟ್, ಮುನಿಸು ಇಲ್ಲದೇ ಇದ್ದರೆ ಶೋಗೆ ಕಳೆಕಟ್ಟುವುದಾದರೂ ಹೇಗೆ ಹೇಳಿ?
ಮೇಡಂ ಬೇಗ ವಾಪಾಸ್ ಬರಲಿ. ಕರ್ನಾಟಕದ ಆರೇಳು ಕೋಟಿ ಕನ್ನಡಿಗರ ಮನೆಮನೆಗಳ ಸಮಸ್ಯೆಗಳನ್ನೆಲ್ಲ ಅವರು ಇತ್ಯರ್ಥ ಮಾಡಲಿ. ಒಂದೊಂದು ಸರ್ತಿ ಜಗಳ ಆಗುತ್ತಪ್ಪಾ? ಜನ ಚಪ್ಪಲಿಲೂ ಹೊಡೆದಾಡುತ್ತಾರೆ, ಬಿಪಿ ಏರಿದರೆ ಮಚ್ಚಲ್ಲೂ ಹೊಡೆದಾಡುತ್ತಾರೆ. ನಿನ್ನೆ ಒಬ್ಬಳು ಮೂರ್ಛೆ ತಪ್ಪಿದ್ದಾಳೆ, ನಾಳೆ ಇನ್ನ್ಯಾರೋ ಕೊಲೆಯೂ ಆಗಿಬಿಡಬಹುದು. ಆಗಲಿಬಿಡಿ. ಎಲ್ಲ ಸಾರ್ವಜನಿಕರ ಎದುರು, ಕ್ಯಾಮೆರಾ ಎದುರು ನಡೆಯುತ್ತಲ್ಲಾ? ಎವಿಡೆನ್ಸ್ ಇರುತ್ತೆ, ಆ ಪ್ರಕರಣದ ವಿಚಾರಣೆಯನ್ನೂ ಜಟಕಾ ಬಂಡಿಯ ಕೋರ್ಟಿನಲ್ಲೇ ಮಾಡಬಹುದು. ಕೊಂದವರಿಗೆ ಶಿಕ್ಷೆ ಆಗುತ್ತೆ. ಮನೆಯಲ್ಲಿ ಹೊಡೆದಾಡಿಕೊಂಡು ಸಾಯುವವರು ಸ್ಟುಡಿಯೋದಲ್ಲಿ ಸತ್ತರೆ ಏನಂತೆ, ಕಾರ್ಯಕ್ರಮಕ್ಕೆ ಇನ್ನಷ್ಟು ಟಿಆರ್‌ಪಿ ಬರುತ್ತೆ. ಸಮಸ್ಯೆ ತೆಗೆದುಕೊಂಡು ಬರೋರು ಜಾಸ್ತಿಯಾಗ್ತಾರೆ. ಅಲ್ಲಿಗೆ ಅಖಂಡ ಕರ್ನಾಟಕದ ಸಮಸ್ಯೆಗಳೆಲ್ಲ ಬಗೆಹರಿದುಬಿಡುತ್ತವೆ.
ನೀವೇನಂತೀರಿ?
发表评论