ಕನ್ನಡ ಪತ್ರಿಕೆಗಳ ಅಸಲಿ ಕಾಳಗ ಇನ್ನೇನು ಶುರುವಾಗಲಿದೆ. ವಿಜಯ ಸಂಕೇಶ್ವರರ ಹೊಸ ಪತ್ರಿಕೆ ಇತರೆಲ್ಲ ಪತ್ರಿಕಾ ಮಾಲೀಕರನ್ನು ತುದಿಗಾಲಲ್ಲಿ ನಿಲ್ಲಿಸಿದೆ ಎಂದರೆ ಅದು ಅತಿಶಯೋಕ್ತಿಯೇನಲ್ಲ. ಸಂಕೇಶ್ವರರ ಹೊಸ ಪತ್ರಿಕೆ ಹೆಸರೇನು? ಪತ್ರಿಕೆಯ ಮುಖಬೆಲೆ ಕೇವಲ ಐವತ್ತು ಪೈಸೆಯಾಗಿರುತ್ತಾ? ಒಟ್ಟು ಹತ್ತು ಆವೃತ್ತಿಗಳನ್ನು (ವಿಜಯ ಕರ್ನಾಟಕ ಈಗ ಹೊಂದಿರುವ ಆವೃತ್ತಿಗಳ ಸಂಖ್ಯೆ ಹತ್ತು, ಇದೇ ಈಗ ಅತಿಹೆಚ್ಚು.) ಅವರು ಏಕಕಾಲಕ್ಕೆ ತರುತ್ತಾರಾ? ಮೊದಲ ಹಂತದಲ್ಲಿ ಯಾವ ಆವೃತ್ತಿಗಳನ್ನು ತರುತ್ತಾರೆ? ಏನೇನಾಗುತ್ತೆ?

ಹಾಗೆ ನೋಡಿದರೆ ಮತ್ತೊಂದು ಸುತ್ತಿನ ದರಸಮರಕ್ಕೆ ಯಾವ ಪತ್ರಿಕೆಯೂ ಸಿದ್ಧವಾಗಿರಲಿಲ್ಲ. ಒಂದು ವೇಳೆ ಸಂಕೇಶ್ವರರ ತಮ್ಮ ದರಸಮರದ ಹಳೇ ಕಸರತ್ತನ್ನು ಪ್ರಯೋಗಿಸಿದರೆ ಅದನ್ನು ಎದುರಿಸುವುದಾದರೂ ಹೇಗೆ? ಇದು ಪತ್ರಿಕಾ ಸಂಸ್ಥೆಗಳು ಕೇಳಿಕೊಳ್ಳುತ್ತಿರುವ ಪ್ರಶ್ನೆ.

ವಿಜಯ ಕರ್ನಾಟಕ ಆರಂಭವಾಗಿ, ಅದು ತನ್ನ ಮುಖಬೆಲೆಯನ್ನು ಇಳಿಸಿ ದರಸಮರಕ್ಕೆ ಇಳಿದಾಗ ಮೊದಮೊದಲು ಇತರ ಪತ್ರಿಕೆಗಳು ಹಳೆಯ ದರದೊಂದಿಗೇ ಮುಂದುವರೆದಿದ್ದವು. ನೋಡನೋಡುತ್ತಿದ್ದಂತೆ ವಿಜಯ ಕರ್ನಾಟಕ ಎಲ್ಲರ ಅಂಡರ್ ಎಸ್ಟಿಮೇಟ್ ಅನ್ನು ನಾಚಿಸುವಂತೆ ಕರ್ನಾಟಕವನ್ನೇ ಆವರಿಸಿಕೊಂಡಿತು. ಕಡೆಗೆ ಹೊಡೆತವನ್ನು ತಡೆದುಕೊಳ್ಳಲಾಗದೆ ಎಲ್ಲ ಪತ್ರಿಕೆಗಳೂ ದರ ಇಳಿಸಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಬೇಕಾಯಿತು. ಈ ಬಾರಿ ಏನೇನಾಗಬಹುದು? ಇತರ ಪತ್ರಿಕೆಗಳು ಮೊದಲೇ ದರ ಇಳಿಸುತ್ತವೆಯೇ? ಅಥವಾ ಸ್ವಲ್ಪ ತಡೆದು ತೀರ್ಮಾನ ತೆಗೆದುಕೊಳ್ಳುತ್ತವೆಯೇ?

ಸಂಕೇಶ್ವರರ ಪತ್ರಿಕೆಯಿಂದ ದೊಡ್ಡ ಥ್ರೆಟ್ ಅನುಭವಿಸಬೇಕಾಗಿರುವುದು ಅವರೇ ಕಟ್ಟಿ ಬೆಳೆಸಿದ ವಿಜಯ ಕರ್ನಾಟಕ ಪತ್ರಿಕೆ ಎಂಬುದು ದೊಡ್ಡ ವಿಪರ್ಯಾಸ. ವಿಜಯ ಕರ್ನಾಟಕದ ಕೋಟೆಯಲ್ಲಿ ಪಾಯದ ಕಲ್ಲುಗಳು ಎಲ್ಲೆಲ್ಲಿವೆ? ಎಲ್ಲಿ ಸುರಂಗ ಮಾರ್ಗವಿದೆ? ಎಲ್ಲಿ ಬುರುಜುಗಳಿವೆ? ಎಲ್ಲಿ ಕುದುರೆಗಳನ್ನು ಕಟ್ಟುವ ಲಾಯಗಳಿವೆ? ಇವೆಲ್ಲ ಗೊತ್ತಿರುವುದು ಸಂಕೇಶ್ವರರರಿಗೆ. ತಮ್ಮ ಹಳೇ ನೆಟ್‌ವರ್ಕ್ ಕಡೆಯೇ ಗಮನ ಹರಿಸಿ ಅಲ್ಲೇ ಹೆಚ್ಚು ವರ್ಕ್ ಔಟ್ ಮಾಡುತ್ತ ಹೊರಟರೆ ಶಿಥಿಲವಾಗುವುದು ಅವರ ಮಾಜಿ ಸಂಸ್ಥೆಯ ಅಡಿಪಾಯವೇ. ಇಂಥ ಅಪಾಯವನ್ನು ದೂರಾಲೋಚಿಸಿಯೇ ಟೈಮ್ಸ್ ಮಾಲೀಕರು ವಿಜಯ ಕರ್ನಾಟಕ ಮತ್ತದರ ಉಪ ಉತ್ಪನ್ನಗಳನ್ನು ಕೊಳ್ಳುವಾಗ ಸಂಕೇಶ್ವರರು ಇನ್ನೈದು ವರ್ಷ ಯಾವುದೇ ಪತ್ರಿಕೆ ಮಾಡಕೂಡದು ಎಂಬ ಕರಾರನ್ನು ಒಪ್ಪಂದದಲ್ಲಿ ಕಾಣಿಸಿದ್ದರು. ಒಪ್ಪಂದ ಮುಗಿದಿದೆ. ಸಂಕೇಶ್ವರರು ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ವ್ಯವಹಾರ, ಯುದ್ಧದಲ್ಲಿ ಮಾನವೀಯತೆ, ಮತ್ತೊಂದಕ್ಕೆ ಜಾಗವಿಲ್ಲ. ಅದನ್ನು ಅಪೇಕ್ಷಿಸುವುದೂ ಜಾಣತನವಲ್ಲ. ಸಂಕೇಶ್ವರರ ಪತ್ರಿಕೆ ವಿಜಯ ಕರ್ನಾಟಕದ ಬೇರುಗಳನ್ನು ಸಡಿಲಗೊಳಿಸುತ್ತಾ? ಕಾದು ನೋಡಬೇಕು.

ವಿಜಯ ಕರ್ನಾಟಕದ ಹೊಡೆತದಿಂದ ಕಂಗಾಲಾಗಿದ್ದ ಪ್ರಜಾವಾಣಿ ನಂತರದ ದಿನಗಳಲ್ಲಿ ಸುಧಾರಿಸಿಕೊಂಡಿದ್ದು ಈಗ ಇತಿಹಾಸ. ಐಆರ್‌ಎಸ್ ಸರ್ವೆ ಪ್ರಕಾರ ಪ್ರಜಾವಾಣಿ ಬಹುತೇಕ ವಿಜಯ ಕರ್ನಾಟಕದ ಹತ್ತಿರ ಬಂದು ಕುಳಿತಿದೆ. ಮುಂದೆ ಬರಲಿರುವ ಎಬಿಸಿ ವರದಿ ಏನನ್ನು ಹೇಳುತ್ತದೋ ಕಾದು ನೋಡಬೇಕು. ಹೀಗೆ ಅನಿರೀಕ್ಷಿತವಾಗಿ ಕಳೆದುಕೊಂಡಿದ್ದ ನಂ.೧ ಪಟ್ಟವನ್ನು ಮರಳಿ ಗಿಟ್ಟಿಸಿಕೊಳ್ಳುವತ್ತ ಸಾಗಿರುವ ಪ್ರಜಾವಾಣಿಗೆ ಸಂಕೇಶ್ವರರ ಪತ್ರಿಕೆ ಹೊಸ ತಲೆನೋವು. ಪ್ರಜಾವಾಣಿಗೆ ಯಾವತ್ತೂ ತನ್ನ ಸಾಂಪ್ರದಾಯಿಕ ಓದುಗರ ಮೇಲೇ ವಿಶ್ವಾಸ. ಬೆಲೆಸಮರದ ಸಂಕಷ್ಟದ ಕಾಲದಲ್ಲಿ ಈ ಓದುಗರೇ ಪತ್ರಿಕೆಯ ರಕ್ಷಣೆಗೆ ನಿಂತಿದ್ದರು. ಈ ಬಾರಿಯೂ ಹಾಗೇ ಆಗುತ್ತಾ? ಕಾದು ನೋಡಬೇಕು.

ಇನ್ನು ಕನ್ನಡಪ್ರಭದ ಮಾಲಿಕತ್ವ ಬಹುತೇಕ ಈಗ ರಾಜೀವ್ ಚಂದ್ರಶೇಖರ್ ಕೈಯಲ್ಲಿದೆ. ಅವರು ಹುಮ್ಮಸ್ಸಿನಲ್ಲಿದ್ದಾರೆ. ಕ್ರಿಯಾಶೀಲ ಪತ್ರಕರ್ತ ವಿಶ್ವೇಶ್ವರ ಭಟ್ಟರನ್ನು ಕರೆತಂದು ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಒಂದು ಆಟ ನೋಡುವ ಆತುರದಲ್ಲಿದ್ದರು ರಾಜೀವ್. ನಂ.೧ ಸ್ಥಾನ ಅಲ್ಲದಿದ್ದರೂ ಬರುವ ಒಂದೆರಡು ವರ್ಷಗಳಲ್ಲಿ ಎರಡನೇ ಸ್ಥಾನಕ್ಕಾದರೂ ಏರುವ ವಿಶ್ವಾಸ ಅವರಿಗಿದ್ದಿರಬಹುದು. ಆದರೆ ಸಂಕೇಶ್ವರರ ಪತ್ರಿಕೆ ಎಬ್ಬಿಸಬಹುದಾದ ಕಂಪನಗಳ ಪರಿಣಾಮದಿಂದ ಕನ್ನಡಪ್ರಭವೂ ತಪ್ಪಿಸಿಕೊಳ್ಳಲಾರದು. ಹಿಂದೆಯೂ ಇತರೆಲ್ಲ ಪತ್ರಿಕೆಗಳಂತೆ ಕನ್ನಡಪ್ರಭವೂ ವಿಜಯ ಕರ್ನಾಟಕದ ಹೊಡೆತವನ್ನು ತಿಂದಿದೆ. ಹೀಗಾಗಿ ರಾಜೀವ್ ಅವರು ಹೊಸ ದಾಳಗಳನ್ನು ಹೂಡಬೇಕಾದ ಅನಿವಾರ್ಯತೆಗೆ ಸಿಲುಕಲಿದ್ದಾರೆ. ಹೊಸ ದಾಳಗಳೆಂದರೆ ಇನ್ನೂ ಒಂದಷ್ಟು ಆವೃತ್ತಿಗಳನ್ನು ರೂಪಿಸುವುದು ಇತ್ಯಾದಿ. (ಈಗ ಕನ್ನಡಪ್ರಭ ಒಟ್ಟು ಆರು ಆವೃತ್ತಿಗಳನ್ನು ಹೊಂದಿದೆ.)

ಉತ್ತರ ಕರ್ನಾಟಕ ಭಾಗದಲ್ಲಿ ಸಂಯುಕ್ತ ಕರ್ನಾಟಕವೇ ಜನರಧ್ವನಿಯೆಂಬಂತೆ ಇದ್ದ ಕಾಲದಲ್ಲಿ ಪೇಟೆಗೆ ನುಗ್ಗಿದವರು ಸಂಕೇಶ್ವರರು. ಅವರೂ ಉತ್ತರ ಕರ್ನಾಟಕದವರೇ. ಹೀಗಾಗಿ ಹೆಚ್ಚಿನ ಮೋಹವೂ ಆ ಕಡೆಗೇ ಇತ್ತು. ಯಾರೂ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಂಥ ನಗರಗಳಲ್ಲೂ ಆವೃತ್ತಿಗಳನ್ನು ಸ್ಥಾಪಿಸಿದರು. ಈ ಭಾಗದಲ್ಲಿ ತೀರಾ ಹೊಡೆತ ತಿಂದದ್ದು ಸಂಯುಕ್ತ ಕರ್ನಾಟಕ. ಇತ್ತೀಚಿಗೆ ಸಂಯುಕ್ತ ಕರ್ನಾಟಕವೂ ಸಹ ಹುಣಸವಾಡಿ ರಾಜನ್ ಸಂಪಾದಕತ್ವದಲ್ಲಿ ಹೊಸ ರೂಪ ಪಡೆದು ಒಂದಷ್ಟು ಚೇತರಿಸಿಕೊಂಡಿತ್ತು. ಈಗ ಸಂಕೇಶ್ವರರು ತಮ್ಮ ನೆಚ್ಚಿನ ಹುಬ್ಬಳ್ಳಿ, ಬಾಗಲಕೋಟ, ಗಂಗಾವತಿ, ಗುಲ್ಬರ್ಗ ಆವೃತ್ತಿಗಳನ್ನು ತೆರೆಯುವುದು ಬಹುತೇಕ ಖಚಿತ. ಸಂಯುಕ್ತ ಕರ್ನಾಟಕ ಮತ್ತೆ ಎದುರಿಸಬೇಕಾದ ಸಮಸ್ಯೆ ಇದು.

ಇನ್ನು ಉದಯವಾಣಿ ಜನ್ಮ ತಳೆದಾಗಿನಿಂದ ಕರಾವಳಿಯಲ್ಲಿ ತನ್ನ ಪ್ರಭಾವಳಿಯನ್ನು ಬೆಳೆಸಿಕೊಂಡು ಬಂದ ಪತ್ರಿಕೆ. ಅಲ್ಲಿ ಮೊಟ್ಟ ಮೊದಲ ಬಾರಿಗೆ ಅದು ಪೈಪೋಟಿಯನ್ನು ಎದುರಿಸಿದ್ದು ವಿಜಯ ಕರ್ನಾಟಕದ ಮೂಲಕವೇ. ಕರಾವಳಿ ಜನರ ಆಯ್ಕೆ, ಆದ್ಯತೆಗಳೇ ಬೇರೆ. ಅದನ್ನು ಸೂಕ್ಷ್ಮವಾಗಿ ಗುರುತಿಸಿದ್ದ ವಿಜಯ ಕರ್ನಾಟಕ ಕರಾವಳಿಯಲ್ಲೂ ಕರಾಮತ್ತು ತೋರಲು ಸಫಲವಾಗಿತ್ತು. ಕರಾವಳಿ ಜನರಿಗಾಗಿ ವಿಜಯ ಕರ್ನಾಟಕದ ಹೆಸರಿನಲ್ಲೇ ಒಂದು ಮಧ್ಯಾಹ್ನದ ಪತ್ರಿಕೆಯನ್ನೂ ಬಹಳ ಕಾಲ ನಡೆಸಿತ್ತು. ಈ ಬಾರಿ ಸಂಕೇಶ್ವರರು ಮತ್ತೆ ಕರಾವಳಿಯಲ್ಲೂ ಅಂಥ ಮೋಡಿ ಮಾಡಬಲ್ಲರೇ? ಇದು ಪ್ರಶ್ನೆ.

ಇದು ದೊಡ್ಡ ಪತ್ರಿಕೆಗಳ ಕಥೆಯಾಯಿತು. ಸ್ಥಳೀಯ ಪತ್ರಿಕೆಗಳ ವ್ಯಥೆ? ಒಂದು ವೇಳೆ ಸಂಕೇಶ್ವರರು ಒಂದು ರುಪಾಯಿಗೋ, ಒಂದೂವರೆ ರುಪಾಯಿಗೋ ಪತ್ರಿಕೆ ಕೊಡಲು ಹೊರಟರೆ ತತ್ ಕ್ಷಣದ ಹೊಡೆತ ತಿನ್ನುವವು ಸ್ಥಳೀಯ ಪತ್ರಿಕೆಗಳೇ. ಮೊದಲ ಸುತ್ತಿನ ದರಸಮರದಲ್ಲಿ ಎಷ್ಟೋ ಪತ್ರಿಕೆಗಳು ಸರ್ವನಾಶವಾಗಿ ಹೋಗಿದ್ದವು. ಸರ್ಕಾರಿ ಜಾಹೀರಾತಿನ ಮೇಲೆ ಬದುಕುತ್ತಿರುವ ಪತ್ರಿಕೆಗಳಷ್ಟೇ ಹೇಗೋ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಸಾಧ್ಯವಾಗಿತ್ತು. ಈಗ ಪತ್ರಿಕೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುಸು ಧಾರಾಳವಾಗಿ ಜಾಹೀರಾತು ಕೊಡುತ್ತಿರುವುದರಿಂದ ಸ್ಥಳೀಯ ಪತ್ರಿಕೆಗಳು ತಕ್ಕಮಟ್ಟಿಗೆ ಉಸಿರಾಡುತ್ತಿವೆ.

ಈಗಾಗಲೇ ಎಲ್ಲ ರಾಜ್ಯಮಟ್ಟದ ಪತ್ರಿಕೆಗಳೂ ಸ್ಥಳೀಯ ಆವೃತ್ತಿಗಳ ಮೂಲಕ ಸ್ಥಳೀಯ ಪತ್ರಿಕೆಗಳು ಕೊಡುವ ಸುದ್ದಿಗಳನ್ನೆಲ್ಲಾ ಕೊಡುತ್ತಿವೆ. ಜಾಹೀರಾತು ದರವೂ ಸ್ಥಳೀಯ ಆವೃತ್ತಿಗಳಿಗೆ ಕಡಿಮೆಯಿರುವುದರಿಂದ ಆ ಆದಾಯವೂ ಸ್ಥಳೀಯ ಪತ್ರಿಕೆಗಳ ಕೈ ತಪ್ಪಿವೆ. ಒಂದೊಮ್ಮೆ ಸಂಕೇಶ್ವರರ ಪತ್ರಿಕೆ ದರ ಸಮರವನ್ನೂ ಆರಂಭಿಸಿದರೆ ಸ್ಥಳೀಯ ಪತ್ರಿಕೆಗಳು ಹಣ್ಣುಗಾಯಿ ನೀರುಗಾಯಿ ಆಗುವುದು ಖಚಿತ.

ಒಬ್ಬ ಸಂಕೇಶ್ವರ್ ಹುಟ್ಟಿಸಿರುವ ಭೀತಿ ಇದು. ಇದೆಲ್ಲವೂ ಕೊಂಚ ಹೈಪಾಥೆಟಿಕಲ್ ಅಂತ ನಿಮಗೆ ಅನ್ನಿಸಬಹುದು. ಆದರೆ ಸಂಕೇಶ್ವರರ ವ್ಯಾವಹಾರಿಕ ಜಾಣ್ಮೆ ಮತ್ತು ತಂತ್ರಗಾರಿಕೆ ಗೊತ್ತಿರುವ, ಈಗಾಗಲೇ ಹೊಡೆತ ತಿಂದಿರುವ ಇತರ ಪತ್ರಿಕೆಗಳ ಮ್ಯಾನೇಜ್‌ಮೆಂಟ್‌ಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿವೆ.

ಸಂಕೇಶ್ವರ್ ಹಿಂದೆ ಮಾಡಿದ, ಮುಂದೆ ಮಾಡಬಹುದಾದ ದರ ಸಮರದ ಪರ-ವಿರೋಧ ಚರ್ಚೆ ಒಂದೆಡೆಯಿರಲಿ. ಕನ್ನಡ ಪತ್ರಿಕಾ ರಂಗಕ್ಕೆ ಹೊಸ ರೂಪ ಕೊಟ್ಟವರು ಸಂಕೇಶ್ವರ್ ಅವರೇ ಎನ್ನುವುದನ್ನು ಮರೆಯುವಂತಿಲ್ಲ. ವಿಜಯ ಕರ್ನಾಟಕದ ಮೂಲಕ ಇತರ ಪತ್ರಿಕೆಗಳ ಓದುಗರನ್ನು ಸೆಳೆದುಕೊಳ್ಳುವುದಕ್ಕಿಂತ ಅವರು ಹೊಸ ಓದುಗರನ್ನು ಸೃಷ್ಟಿಸಲು ಸಫಲರಾಗಿದ್ದರು. ಒಂದು ದಿನ ತಡವಾಗಿ ಪತ್ರಿಕೆ ತಲುಪುತ್ತಿದ್ದ ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೆ ಬೆಳಿಗ್ಗೆ ೬ಗಂಟೆಗೆಲ್ಲ ವಿಜಯ ಕರ್ನಾಟಕ ತಲುಪಿಸಿ ಅಲ್ಲಿನ ಜನರನ್ನು ರೋಮಾಂಚಿತರನ್ನಾಗಿಸಿದ್ದರು.

ಕನ್ನಡ ಪತ್ರಿಕೆಗಳು ಬೆಂಗಳೂರು, ಹುಬ್ಬಳ್ಳಿ, ಮಂಗಳೂರು(ಮಣಿಪಾಲ)ಗಳಲ್ಲಿ ಮಾತ್ರ ಆವೃತ್ತಿಗಳನ್ನು ತರುತ್ತಿದ್ದ ಸಮಯದಲ್ಲಿ ಹತ್ತು ಆವೃತ್ತಿಗಳನ್ನು ತೆರೆದು, ಸ್ಥಳೀಯ ಸುದ್ದಿಗಳನ್ನು ಪುಟಗಟ್ಟಲೆ ಓದುಗರಿಗೆ ನೀಡುವಲ್ಲಿ ಸಫಲವಾಗಿದ್ದು ವಿಜಯ ಕರ್ನಾಟಕವೇ. ಇತರ ಪತ್ರಿಕೆಗಳು ಜಿಗುಟುತನ ಬಿಟ್ಟು ಇನ್ನೊಂದಷ್ಟು ಆವೃತ್ತಿಗಳನ್ನು ತೆರೆಯುವಂತಾಗಲು ವಿಜಯ ಕರ್ನಾಟಕವೇ ಕಾರಣವಾಗಿತ್ತು ಎನ್ನುವುದನ್ನೂ ಮರೆಯುವಂತಿಲ್ಲ.

ಆದರೆ ಬೆಲೆ ಸಮರ? ಅದು ಸರಿಯಾದ ಕ್ರಮವೇ? ನೀವೇನೆನ್ನುತ್ತೀರಾ?

0 komentar

Blog Archive