೨೦೧೧ರ ಮೊದಲ ತ್ರೈಮಾಸಿಕದ ಐಆರ್‌ಎಸ್ ಸರ್ವೆ ಫಲಿತಾಂಶಗಳು ಬಂದಿವೆ. ಯಥಾಪ್ರಕಾರ ವಿಜಯ ಕರ್ನಾಟಕ ಮೊದಲ ಸ್ಥಾನದಲ್ಲಿ ಇದೆಯಾದರೂ, ಪ್ರಜಾವಾಣಿ ಬಹುತೇಕ ವಿಜಯ ಕರ್ನಾಟಕದ ಹತ್ತಿರ ಬಂದಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಸರ್ವೆ ಪ್ರಕಾರ ವಿಜಯ ಕರ್ನಾಟಕದ ಓದುಗರ ಅಂದಾಜು ಸಂಖ್ಯೆ ೩೪.೭೦ ಲಕ್ಷವಾದರೆ ಹತ್ತಿರದಲ್ಲೇ ಇರುವ ಪ್ರಜಾವಾಣಿಯ ಓದುಗರ ಸಂಖ್ಯೆ ೩೪.೦೩ ಲಕ್ಷ. ಮುಂದಿನ ತ್ರೈಮಾಸಿಕ ಸರ್ವೆ ಕಾಲಕ್ಕೆ ಪ್ರಜಾವಾಣಿಯು ವಿಜಯ ಕರ್ನಾಟಕವನ್ನು ಮೀರಿಸಿ ಮತ್ತೆ ತನ್ನ ನಂ.೧ ಸ್ಥಾನ ಗಿಟ್ಟಿಸಿಕೊಳ್ಳಬಹುದೇ? ಕಾದು ನೋಡಬೇಕು.

ಸದ್ಯಕ್ಕೆ ಎರಡನೇ ಸ್ಥಾನದಲ್ಲಿರುವ ಪ್ರಜಾವಾಣಿ ಕಳೆದ ತ್ರೈಮಾಸಿಕದಲ್ಲಿ ಶೇ.೭ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ೨.೨೩ ಲಕ್ಷ ಹೊಸ ಓದುಗರನ್ನು ಪಡೆದುಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಪ್ರಜಾವಾಣಿ ಗಣನೀಯವಾದ ಪ್ರಗತಿಯನ್ನು ಕಂಡಿದ್ದು ಶೇ.೫೨ರಷ್ಟು ಒಟ್ಟಾರೆ ಬೆಳವಣಿಗೆ ದಾಖಲಿಸಿದೆ.

ಮೂರನೇ ಸ್ಥಾನವನ್ನು ಕನ್ನಡಪ್ರಭ ಕಾಯ್ದಿಟ್ಟುಕೊಂಡಿದೆ. ಐಆರ್‌ಎಸ್ ಸರ್ವೆಯ ಪ್ರಕಾರ ಕನ್ನಡಪ್ರಭದ ಓದುಗರ ಸಂಖ್ಯೆ ೧೩.೩೪ ಲಕ್ಷ. ಕಳೆದ ತ್ರೈಮಾಸಿಕದಲ್ಲಿ ಇದು ೧೨.೩೭ ಲಕ್ಷವಾಗಿತ್ತು. ಶೇ.೭.೮ರಷ್ಟು ಬೆಳವಣಿಗೆ ದಾಖಲಿಸಿರುವ ಕನ್ನಡಪ್ರಭ ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ. ಇದರ ಪ್ರಮಾಣ ಶೇ.೭೮.

ಮೂರನೇ ಸ್ಥಾನವನ್ನು ಕಸಿದುಕೊಳ್ಳಲು ಯತ್ನಿಸುತ್ತಿರುವ ಸಂಯುಕ್ತ ಕರ್ನಾಟಕ ಪತ್ರಿಕೆಯು ಕನ್ನಡಪ್ರಭಕ್ಕೆ ನಿಕಟ ಸ್ಪರ್ಧೆಯನ್ನು ಒಡ್ಡುತ್ತಿದೆ. ಕನ್ನಡಪ್ರಭ ಮತ್ತು ಸಂಯುಕ್ತ ಕರ್ನಾಟಕಗಳ ಓದುಗರ ಸಂಖ್ಯೆಯಲ್ಲಿ ಅಷ್ಟೇನು ವ್ಯತ್ಯಾಸಗಳಿಲ್ಲ. ೨೦೧೧ರ ಮೊದಲ ತ್ರೈಮಾಸಿಕದ ವರದಿ ಪ್ರಕಾರ ಸಂಯುಕ್ತ ಕರ್ನಾಟಕ ಓದುಗರ ಸಂಖ್ಯೆ ೧೩.೦೬ ಲಕ್ಷ. ಈ ತ್ರೈಮಾಸಿಕದಲ್ಲಿ ಸಂಯುಕ್ತ ಕರ್ನಾಟಕ ೯.೬ ಶೇ. ಬೆಳವಣಿಗೆ ದಾಖಲಿಸಿರುವುದು ಅಚ್ಚರಿಗೆ ಕಾರಣ. ಹಿಂದಿನ ತ್ರೈಮಾಸಿಕದಲ್ಲಿ ೧೧.೯೨ ಲಕ್ಷವಾಗಿದ್ದ ಓದುಗರ ಸಂಖ್ಯೆ ಈಗ ೧೩.೦೬ಕ್ಕೆ ಏರಿದೆ.. ಕಳೆದ ವರ್ಷ ಸಂಯುಕ್ತ ಕರ್ನಾಟಕ ಓದುಗರ ಸಂಖ್ಯೆ ಶೇ.೬೧ರಷ್ಟು ಏರಿಕೆಯಾಗಿದೆ.

ಮತ್ತೊಂದು ಅಚ್ಚರಿಯ ಬೆಳವಣಿಗೆಯಲ್ಲಿ ಉದಯವಾಣಿ ಪತ್ರಿಕೆ ಐಆರ್ ಎಸ್ ಸರ್ವೆಯ ಪ್ರಕಾರ ಶೇ.೪ರಷ್ಟು ಓದುಗರನ್ನು ಕಳೆದುಕೊಂಡಿದೆ. ೫ನೇ ಸ್ಥಾನದಲ್ಲಿರುವ ಉದಯವಾಣಿಯ ಓದುಗರ ಸಂಖ್ಯೆ ೮.೯೩ ಲಕ್ಷ. ಕಳೆದ ತ್ರೈಮಾಸಿಕದಲ್ಲಿ ಇದು ೯.೩೧ ಲಕ್ಷವಾಗಿತ್ತು.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ೬ನೇ ಸ್ಥಾನದಲ್ಲಿದೆ. ೨೦೧೧ರ ಮೊದಲ ತ್ರೈಮಾಸಿಕದ ವರದಿ ಪ್ರಕಾರ ೫.೩೫ ಲಕ್ಷ ಓದುಗರನ್ನು ಗಳಿಸಲು ಶಕ್ತವಾಗಿದೆ. ೭ನೇ ಸ್ಥಾನದಲ್ಲಿರುವ ಡೆಕ್ಕನ್ ಹೆರಾಲ್ಡ್ ಗಣನೀಯ ಪ್ರಗತಿ ಸಾಧಿಸಿದ್ದು ಶೇ,೧೦.೭ರಷ್ಟು ಹೊಸ ಓದುಗರನ್ನು ಪಡೆದಿದೆ. ಹೆರಾಲ್ಡ್ ಓದುಗರ ಸಂಖ್ಯೆ ೪.೨೩ ಲಕ್ಷ.

ಸಂಜೆವಾಣಿ ಮತ್ತೆ ೮ನೇ ಸ್ಥಾನದಲ್ಲಿದೆ. ೯ನೇ ಸ್ಥಾನಕ್ಕೆ ಬೆಂಗಳೂರು ಮಿರರ್ ಬಂದಿದೆ. ಕಳೆದ ಬಾರಿ ಭಾರೀ ಬೆಳವಣಿಗೆ ಸಾಧಿಸಿದ್ದ ಮರಾಠಿ ಪತ್ರಿಕೆ ತರುಣ್ ಭಾರತ್ ೧೦ನೇ ಸ್ಥಾನಕ್ಕೆ ಕುಸಿದಿದೆ.

ಕೊನೆಮಾತು: ವಿಶ್ವೇಶ್ವರ ಭಟ್ಟರು ಸುವರ್ಣ ನ್ಯೂಸ್ ಚುಕ್ಕಾಣಿ ಹಿಡಿದಿದ್ದಾರೆ. ಅವರೀಗ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಎರಡಕ್ಕೂ ಸಾರಥಿ. ಹೀಗೆ ಪ್ರಿಂಟ್ ಮತ್ತು ವಿಶುಯಲ್ ಮೀಡಿಯಾ ಎರಡನ್ನೂ ನಿಭಾಯಿಸಲು ಹೊರಟ ಮೊದಲ ಪತ್ರಕರ್ತ ಭಟ್ಟರೇ ಇರಬೇಕು. ಹೊಸ ಹೊಣೆಗಾರಿಕೆಯಲ್ಲಿ ಅವರು ಯಶಸ್ವಿಯಾಗಲಿ ಎಂದು ಶುಭ ಹಾರೈಸೋಣ
0 komentar

Blog Archive