ರಾಜ್ಯ ರಾಜಕಾರಣದಲ್ಲಿ ಭರ್ಜರಿ ವಿದ್ಯಮಾನಗಳು. ಸರ್ಕಾರ ವಜಾಗೊಳಿಸಲು, ವಿಧಾನಸಭೆ ಅಮಾನತ್ತಿನಲ್ಲಿಡಲು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಕೇಂದ್ರ ಸರ್ಕಾರಕ್ಕೆ ನೀಡಿರುವ ಶಿಫಾರಸಿನಿಂದಾಗಿ ಕ್ಷಣಕ್ಷಣಕ್ಕೂ ತರೇಹವಾರಿ ಸುದ್ದಿಗಳು, ಬ್ರೆಕಿಂಗ್ ನ್ಯೂಸುಗಳು. ಕರ್ನಾಟಕದ ಮಾಧ್ಯಮಗಳಿಗೆ ಬಿಡುವಿಲ್ಲದ ಕೆಲಸ. ಸುದ್ದಿ ಚಾನಲ್ಗಳಂತೂ ಎಡೆಬಿಡದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.
ಆದರೆ, ಕನ್ನಡ ಸುದ್ದಿ ಚಾನಲ್ಗಳು ಇಂಥ ವಿದ್ಯಮಾನಗಳನ್ನು ವರದಿ, ವಿಶ್ಲೇಷಣೆ ಮಾಡುವಲ್ಲಿ ಇನ್ನೂ ಸಮರ್ಥವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಇಂಥ ಬಿಕ್ಕಟ್ಟನ್ನು ಸರಿಯಾಗಿ ಅರ್ಥಮಾಡಿಕೊಂಡೇ ಇರದ ಸುದ್ದಿ ನಿರೂಪಕರು, ಸುತ್ತಮುತ್ತ ನಿಂತವರು ಹೇಳಿದ್ದನ್ನೇ ನಂಬಿ ವರದಿ ಮಾಡುವ ವರದಿಗಾರರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಸಂವಿಧಾನದ ೩೫೬ನೇ ಪರಿಚ್ಛೇದ ಅಂದರೆ ಏನು ಎಂದು ಗೊತ್ತಿಲ್ಲದವರು ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಏನನ್ನು ವರದಿ ಮಾಡಲು, ಏನನ್ನು ವಿಶ್ಲೇಷಿಸಲು ಸಾಧ್ಯ?
ಎಚ್.ಆರ್.ರಂಗನಾಥ್ ನಿರ್ಗಮನದ ನಂತರ ಸುವರ್ಣ ನ್ಯೂಸ್ ಸಪ್ಪೆಯಾಗಿದೆ ಎಂದು ಹಿಂದೆಯೇ ಹೇಳಿದ್ದೆವು. ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಮಾತು ಇನ್ನಷ್ಟು ಪರಿಣಾಮಕಾರಿಯಾಗಿ ಸಾಬೀತಾಯಿತು. ಇಂಗ್ಲಿಷ್ ಸುದ್ದಿವಾಹಿನಿಗಳ ಪತ್ರಕರ್ತರು ತೋರುವ ವೃತ್ತಿಪರತೆಯನ್ನು ರಂಗನಾಥ್ ಸುವರ್ಣದಲ್ಲಿ ತಂದಿದ್ದರು. ಕರ್ನಾಟಕದ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲು ಇಂಗ್ಲಿಷ್ ಚಾನಲ್ಗಳ ಮೊರೆಹೊಗುತ್ತಿದ್ದವರನ್ನು ರಂಗನಾಥ್ ಸೆಳೆದಿದ್ದರು. ಈ ಬಾರಿ ರಂಗನಾಥ್ ಇಲ್ಲದ ಸುವರ್ಣ ನ್ಯೂಸ್ ಇಂಥ ವೃತ್ತಿಪರತೆಯನ್ನು ಕಳೆದುಕೊಂಡಿದ್ದು ವಿಷಾದನೀಯ. ಕನ್ನಡ ವೀಕ್ಷಕರೂ ಸಿಎನ್ಎನ್ ಐಬಿಎನ್, ಎನ್ಡಿಟಿವಿ, ಟೌಮ್ಸ್ ನೌ ಗಳನ್ನು ನೋಡಿ ಸುದ್ದಿ ದಾಹವನ್ನು ತಣಿಸಿಕೊಳ್ಳಬೇಕಾಯಿತು.
ಹಮೀದ್ ಪಾಳ್ಯ ಮತ್ತು ಗೌರೀಶ್ ಅಕ್ಕಿ ಉತ್ತಮ ನಿರೂಪಕರು ಎಂಬುದೇನೋ ನಿಜ. ಆದರೆ ರಾಜಕೀಯ, ಕಾನೂನು ವಿಶ್ಲೇಷಣೆಯಲ್ಲಿ ಅವರು ಇನ್ನೂ ಎಳಸು ಎಂಬುದು ಸಾಬೀತಾಯಿತು. ಇಬ್ಬರಲ್ಲೂ ಆತ್ಮವಿಶ್ವಾಸದ ಕೊರತೆ ಕಾಣಿಸಿತು. ಬಹಳಷ್ಟು ಸಂದರ್ಭಗಳಲ್ಲಿ ಹಮೀದ್ ಅವರು ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಅವರನ್ನೇ ಅವಲಂಬಿಸಬೇಕಾಯಿತು. ಪ್ರಶಾಂತ್ ದಿಲ್ಲಿ ವಿದ್ಯಮಾನಗಳನ್ನು ಚೆನ್ನಾಗೇನೋ ವಿಶ್ಲೇಷಿಸಿದರು. ಆದರೆ ರಂಗನಾಥ್ ಇದ್ದಿದ್ದರೆ ಅವರಿಂದ ಇನ್ನಷ್ಟು ಹೊರತೆಗೆಸಬಹುದಿತ್ತು ಅನಿಸಿತು.
ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜಕಾರಣಿಗಳು, ಕಾನೂನು ಪಂಡಿತರ ಜತೆಗಿನ ಚರ್ಚೆಯ ಸಂದರ್ಭದಲ್ಲೂ ಸಹ ರಂಗನಾಥ್ ಠೊಳ್ಳಾಗಿರುವ, ಬುರುಡೆ ಬಿಡುವ ಮಾತುಗಾರರನ್ನು ಬಹಳ ಸುಲಭವಾಗಿ ಬೆತ್ತಲಾಗಿಸುತ್ತಿದ್ದರು. ತಿಳಿವಳಿಕೆ ಇರುವ ಪ್ರಬುದ್ಧರಿಂದ ಸಂದರ್ಭಕ್ಕೆ ಅಗತ್ಯವಾದ, ಸನ್ನಿವೇಶವನ್ನು ಕಟ್ಟಿಕೊಡಬಲ್ಲ ಉತ್ತರಗಳನ್ನು ಹೊರತೆಗೆಸುತ್ತಿದ್ದರು. ಖಚಿತವಾದ ಪ್ರಶ್ನೆಗಳನ್ನು ಎಸೆಯುವ, ದಾರಿ ತಪ್ಪುವ ಉತ್ತರಗಳನ್ನು ನಿರ್ದಾಕ್ಷಿಣ್ಯವಾಗಿ ತುಂಡರಿಸುವ ಜಾಣ್ಮೆ ಮತ್ತು ಧೈರ್ಯವೂ ಅವರಿಗಿತ್ತು. ತಮ್ಮದೇ ವೃತ್ತಿಪರತೆಯನ್ನು ಅವರು ಎಲ್ಲ ಸಿಬ್ಬಂದಿಯಿಂದಲೂ ಬಯಸುತ್ತಿದ್ದರು. ಒಮ್ಮೆಮ್ಮೆ ಲೈವ್ ಕಾರ್ಯಕ್ರಮಗಳಲ್ಲಿ ಅವರು ತಮ್ಮ ವರದಿಗಾರರಿಗೆ ನೀಡುತ್ತಿದ್ದ ಸೂಚನೆಗಳು ಅವರಿಂದ ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ವೀಕ್ಷಕರಿಗೂ ಅರ್ಥ ಮಾಡಿಸುತ್ತಿದ್ದವು. ಎಚ್.ಡಿ.ದೇವೇಗೌಡ, ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಎಸ್.ಬಂಗಾರಪ್ಪ, ಡಿ.ಬಿ.ಚಂದ್ರೇಗೌಡ, ರಮೇಶ್ ಕುಮಾರ್.. ಹೀಗೆ ಘಟನಾನುಘಟಿ ನಾಯಕರುಗಳೊಂದಿಗೆ ರಂಗನಾಥ್ ಅತ್ಯಂತ ಆತ್ಮವಿಶ್ವಾಸದಿಂದ ಚರ್ಚೆಗಳನ್ನು ನಡೆಸಬಲ್ಲವರಾಗಿದ್ದರು. ಆದರೆ ರಂಗನಾಥ್ ಇಲ್ಲದ ಸುವರ್ಣದಲ್ಲಿ ಇದೆಲ್ಲವೂ ಈಗ ಕಣ್ಮರೆಯಾಗಿದೆ.
ಬೇರೆ ಚಾನಲ್ಗಳಲ್ಲಿ ಇದಕ್ಕಿಂತ ಭಿನ್ನವಾದ ಪರಿಸ್ಥಿತಿ ಏನಿಲ್ಲ. ಇದ್ದಿದ್ದರಲ್ಲಿ ಟಿವಿ೯ನಲ್ಲಿ ಲಕ್ಷ್ಮಣ್ ಹೂಗಾರ್ ವಿಶ್ಲೇಷಣೆಗಳು ವಿಷಯದ ಆಳವನ್ನು ತಲುಪುತ್ತಿದ್ದವು. ಟಿವಿ೯ ರಾಜಕಾರಣಿಗಳ ಬೈಟ್ಗಳು, ಗ್ರಾಫಿಕ್ ಗಳು, ಪ್ರತಿಭಟನೆಗಳ ಚಿತ್ರಗಳು ಇತ್ಯಾದಿಗಳನ್ನೇ ಹೆಚ್ಚು ನೆಚ್ಚಿಕೊಂಡ ಹಾಗೆ ಕಂಡಿತು.
ಸಮಯ ಟಿವಿಯಲ್ಲಿ ಶಶಿಧರ ಭಟ್ಟರು ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿದರಾದರೂ ಉಳಿದ ತಂಡದಿಂದ ಅವರಿಗೆ ತಕ್ಕ ಬೆಂಬಲ ದೊರೆತ ಹಾಗೆ ಕಾಣಲಿಲ್ಲ. ವಿಶೇಷವಾಗಿ ಅವರ ವರದಿಗಾರರು ಇನ್ನೂ ಪಕ್ವವಾಗಿಲ್ಲ. ಭಟ್ಟರು ಪ್ರಶ್ನೆ ಎಸೆಯುತ್ತಿದ್ದಂತೆ ನರ್ವಸ್ ಆಗುವ ವರದಿಗಾರರಿಂದ ಏನನ್ನು ನಿರೀಕ್ಷಿಸಬಹುದು?
ಜನಶ್ರೀಯಲ್ಲಿ ಅನಂತ್ ಚಿನಿವಾರ್ ಅವರ ನಿರ್ವಹಣೆ, ಅವರು ಬಳಸುವ ಭಾಷೆ ಸೊಗಸು. ತಮ್ಮ ವರದಿಗಾರರೊಂದಿಗೆ ಅವರು ಸಂವಹಿಸುವ ರೀತಿ ರಂಗನಾಥ್ ಅವರನ್ನು ನೆನಪಿಗೆ ತರುತ್ತದೆ. ಚರ್ಚೆಯ ಸಂದರ್ಭದಲ್ಲಿ ತುಂಬ ಮುಖ್ಯವಾದ ಪ್ರಶ್ನೆಗಳನ್ನು ಅವರು ಕೇಳುತ್ತಿದ್ದರು. ಒನ್ಸ್ ಎಗೇನ್, ಅವರಿಗೂ ಸಹ ತಕ್ಕ ಸಿಬ್ಬಂದಿ ಬೆಂಬಲದ ವ್ಯವಸ್ಥೆ ಇದ್ದ ಹಾಗೆ ಕಾಣಲಿಲ್ಲ.
ಮೊನ್ನೆ ಶಶಿಧರ ಭಟ್ಟರು ತಮ್ಮ ಫೇಸ್ಬುಕ್ನ ವಾಲ್ನಲ್ಲಿ ಉತ್ತಮ ನಿರೂಪಕರು ಸಿಗುತ್ತಿಲ್ಲ, ಉತ್ಸಾಹ ಇರುವವರು ಮುಂದೆ ಬನ್ನಿ ಎಂದು ವಿನಂತಿಸಿದ್ದರು. ಇದು ಕೇವಲ ಸಮಯ ಟಿವಿ ಒಂದರ ಸಮಸ್ಯೆ ಅಲ್ಲ. ಎದುರಿನ ಮಾನಿಟರ್ ಮೇಲೆ ಬರುವ ಸುದ್ದಿ ಸಾಲುಗಳನ್ನು ಓದಲು ತಯಾರಿರುವ ಸಾಲುಸಾಲು ನಿರೂಪಕರು ನಮ್ಮ ಚಾನಲ್ಗಳಲ್ಲಿದ್ದಾರೆ. ಇವರುಗಳ ಪೈಕಿ ನೂರಕ್ಕೆ ೯೦ಕ್ಕೂ ಹೆಚ್ಚು ಮಂದಿಗೆ ತಾವೇ ಸ್ವತಃ ನಾಲ್ಕು ಸಾಲು ಸೃಷ್ಟಿಸಿ ಮಾತನಾಡಲು ಬರುವುದಿಲ್ಲ. ಇಂಥವರು ರಾಜಕೀಯ ಬಿಕ್ಕಟ್ಟು, ಸಾಂವಿಧಾನಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹೇಗೆ ತಾನೇ ಕಾರ್ಯಕ್ರಮಗಳನ್ನು ನಡೆಸಿಕೊಡಬಲ್ಲರು? ನ್ಯೂಸ್ ಚಾನಲ್ಗಳು ಎದುರಿಸಬೇಕಿರುವ, ಉತ್ತರ ಕೊಟ್ಟುಕೊಳ್ಳಲೇಬೇಕಿರುವ ಸೀರಿಯಸ್ ಆದ ಪ್ರಶ್ನೆ ಇದು.
ಅಂದ ಹಾಗೆ, ಎಚ್.ಆರ್.ರಂಗನಾಥ್ ಯಾವುದಾದರೂ ನ್ಯೂಸ್ ಚಾನಲ್ಗೆ ಬರುವಂತಾಗಲಿ. ನಾವು ಇಂಗ್ಲಿಷ್ ಚಾನಲ್ಗಳನ್ನು ನೋಡುವ ಕಷ್ಟವನ್ನು ಅವರು ತಪ್ಪಿಸುವಂತಾಗಲಿ.

发表评论