ಪತ್ರಕರ್ತ ಶಂಶೀರ್ ಬುಡೋಳಿ ನಾಗರಿಕ ಪತ್ರಿಕೋದ್ಯಮ ಕುರಿತ ಲೇಖನವೊಂದನ್ನು ಕಳುಹಿಸಿದ್ದಾರೆ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ((M.C.J) ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ.(B.A.-Journalism, D.I.J) ನಡೆಸಿರುವ ಶಂಶೀರ್ ಜೋಳಿಗೆ ಎಂಬ ಬ್ಲಾಗ್ ನಡೆಸುತ್ತಾರೆ. ನಾಗರಿಕ ಪತ್ರಿಕೋದ್ಯಮ ಆಧುನಿಕ ಕಾಲದಲ್ಲಿ ಪಡೆಯುತ್ತಿರುವ ಹೊಸ ರೂಪ ಹಾಗು ಅದರ ಪರಿಣಾಮಗಳ ಬಗ್ಗೆ ಈ ಲೇಖನ ಚರ್ಚಿಸುತ್ತದೆ. -ಸಂಪಾದಕೀಯ
ನಾಗರಿಕ ಪತ್ರಿಕೋದ್ಯಮ ಎಂಬುವುದು ಪತ್ರಿಕೋದ್ಯಮದ ಹೊಸ ಉಗಮವಾಗಿದೆ. ನಿಜಾರ್ಥದಲ್ಲಿ ಅಧಿಕಾರವನ್ನು ಜನರ ಕೈಗೆ ನೀಡಿರುವುದು ನಾಗರಿಕ ಪತ್ರಿಕೋದ್ಯಮವಾಗಿದೆ. ಇವತ್ತು ಸುದ್ದಿವಾಹಿನಿಗಳು ಮಾತ್ರ ನಾಗರಿಕ ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಜೊತೆಗೆ ಅಂತರ್ಜಾಲವು ಎಲ್ಲೆಡೆ ಲಭ್ಯವಾಗುವುದರಿಂದ್ದ ಪ್ರಮುಖ ಸುದ್ದಿಗಳೆಲ್ಲಾ ಆನ್‌ಲೈನ್‌ನಲ್ಲಿಯೇ ಪ್ರಥಮ ಬಾರಿಗೆ ಬಿತ್ತರಗೊಳ್ಳುತ್ತಿದೆ. ಇದು ಸಾಧ್ಯವಾಗಿರುವುದು ಭಾರತದಾದ್ಯಂತ ಇರುವ ನಾಗರಿಕ ಪತ್ರಕರ್ತರಿಂದ. ಈ ಮೂಲಕ ನಾಗರಿಕ ಪತ್ರಿಕೋದ್ಯಮವೆಂಬುದು ಪ್ರಬಲ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಹೇಳಬಹುದು. ಸ್ಥಳೀಯ ಸುದ್ದಿಗಳನ್ನು ವಿಶ್ವಮಟ್ಟದಲ್ಲಿ ಪ್ರಚುರಪಡಿಸುವ ಸಾಧ್ಯತೆ ನಾಗರಿಕ ಪತ್ರಿಕೋದ್ಯಮಕ್ಕಿರುವುದರಿಂದ್ದ ಇದರ ಪ್ರಾಮುಖ್ಯತೆ ದಿನಕಳೆದಂತೆ ಹೆಚ್ಚಾಗುತ್ತಿದೆ.
ನಾಗರಿಕ ಪತ್ರಿಕೋದ್ಯಮವನ್ನು ಹೀಗೆ ವ್ಯಾಖ್ಯಾನಿಸಬಹುದು. ಸುದ್ದಿ, ಲೇಖನ, ವಿಡಿಯೋ ಹಾಗೂ ಆಡಿಯೋಗಳ ಮೂಲಕ ಸುದ್ದಿ ಮೌಲ್ಯ ಅರಿತ ನಾಗರಿಕನೊರ್ವ ತಾನು ಕಂಡ ಅಥವಾ ದಾಖಲಿಸಿಕೊಂಡ ವಿಷಯಗಳನ್ನು ಮಾಧ್ಯಮಗಳಿಗೆ ವರದಿ ಮಾಡುವುದಾಗಿದೆ. ಮುಖ್ಯವಾಗಿ ಇಲ್ಲಿ ನಾಗರಿಕನೆ ವರದಿಗಾರನಾಗಿರುತ್ತಾನೆ. ನಾಗರಿಕ ಪತ್ರಿಕೋದ್ಯಮವು ಪತ್ರಿಕೆಗಳಿಗಿಂತ ಹೆಚ್ಚಾಗಿ ಟಿವಿ ವಾಹಿನಿ ಅಥವಾ ಯೂಟೂಬ್‌ನಂತಹ ಸಾಮಾಜಿಕ ಮಾಧ್ಯಮ ಸೈಟುಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಈಗಾಗಲೇ ನಾಗರಿಕ ವರದಿ ಪ್ರಕಟಿಸುವ ಐವತ್ತಕ್ಕೂ ಹೆಚ್ಚಿನ ವೆಬ್‌ಸೈಟ್‌ಗಳಿವೆ. ಭಾರತದಲ್ಲಿಂದು ಅಸಂಖ್ಯ ವಾರ್ತಾ ವಾಹಿನಿಗಳು ಕಾರ್ಯಾಚರಿಸುತ್ತಿವೆ. ಆದರೆ ಅವುಗಳಲ್ಲಿ ಕೆಲವೇ ವಾಹಿನಿಗಳು ಮಾತ್ರ ಪತ್ರಕರ್ತರನ್ನು ನೇಮಿಸುವ ಹಾಗೂ ತರಬೇತಿಗೊಳಿಸುವ ಕಾರ್ಯವನ್ನು ನಡೆಸುತ್ತಿದೆ. ಸಾಮಾನ್ಯವಾಗಿ ಒಬ್ಬ ಪತ್ರಕರ್ತ ರಾಜ್ಯದ ರಾಜಧಾನಿಯಲ್ಲಿ ಕಾರ್ಯನಿಮಿತ್ತ ನಿಯುಕ್ತಿಗೊಂಡಿರುತ್ತಾನೆ. ಆದರೆ ಭಾರತದ ಕೆಲವು ರಾಜ್ಯಗಳು ಪ್ರಪಂಚದ ಹಲವು ರಾಷ್ಟ್ರಗಳಿಗಿಂತ ವಿಸ್ತೀರ್ಣದಲ್ಲಿ ದೊಡ್ಡದಾಗಿದೆ. ಆದುದರಿಂದ ರಾಜಧಾನಿಯಲ್ಲಿ ಕಾರ್ಯನಿರತರಾಗಿರುವ ಪತ್ರಕರ್ತನಿಂದ ಕೇವಲ ನಗರದಲ್ಲಿ ನಡೆಯುವ ಪ್ರಮುಖ ಘಟನೆಗಳನ್ನು ಮೇಲೆ ಮಾತ್ರ ಬೆಳಕು ಚೆಲ್ಲಲು ಸಾಧ್ಯ. ಆದರೆ ನಾಗರಿಕ ಮಾಧ್ಯಮವು ಈ ಚಿತ್ರಣವನ್ನು ಬದಲಿಸಲಿದೆ. ಇತ್ತೀಚಿನ ದಿನಗಳಲ್ಲಿ ದೇಶದ ದುರ್ಗಮ ಪ್ರದೇಶಗಳಲ್ಲಿ , ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ, ಘಟಿಸುವ, ಸಂಭವಿಸುವ ಘಟನಾವಳಿಗಳು ಕೂಡ ವಾರ್ತಾವಾಹಿನಿಗಳಲ್ಲಿ ಬಿತ್ತರಗೊಳ್ಳಲು ಆರಂಭವಾಗಿದೆ. ಇದು ಸರಕಾರದ ಕಣ್ತೆರೆಸಿದ್ದು, ಆಡಳಿತ ವರ್ಗದ ಮೇಲೆ ಅತ್ಯಂತ ಪರಿಣಾಮ ಬೀರಿದೆ. ಘಟನೆಯ ಸತ್ಯಾಸತ್ಯತೆಯನ್ನು ತಿಳಿದು ತತ್‌ಕ್ಷಣವೇ ಸರಕಾರವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಇದು ಸಹಕಾರಿಯಾಗಿದೆ. ಮಾತ್ರವಲ್ಲ, ಇವತ್ತು ಕನ್ನಡ ಟಿವಿ ವಾಹಿನಿಗಳು ವರದಿ, ಸುದ್ದಿಗಳೇನಾದರೂ ಇದ್ದಲ್ಲಿ ನಮ್ಮ ವರದಿಗಾರರನ್ನು ಸಂಪರ್ಕಿಸಿ ಎಂದು ತಮ್ಮ ವರದಿಗಾರರನ್ನು ಸಂಪರ್ಕ ಮಾಡಲು ದೂರವಾಣಿ ಸಂಖ್ಯೆಯನ್ನು ನೀಡುತ್ತಿದೆ. ವೆಬ್ ಮಾಧ್ಯಮಗಳಲ್ಲಿ ನಾಗರಿಕ ಪತ್ರಕರ್ತನಿಗಾಗಿ ಜಾಗ ಮೀಸಲಿರಿಸಲಾಗಿದೆ. ಇದು ನಾಗರಿಕ ಪತ್ರಿಕೋದ್ಯಮದ ಬದಲಾವಣೆಯ ಗುರುತುಗಳಾಗಿವೆ.
ಯಾವ ವಾಹಿನಿಯು ಇಂತಹ ಘಟನಾವಳಿಗಳನ್ನು, ವಾರ್ತೆಗಳನ್ನು ಮೊದಲಾಗಿ ತತ್‌ಕ್ಷಣವೇ ಪ್ರಸಾರ ಮಾಡುತ್ತದೆಯೋ ಆ ವಾಹಿನಿಯು ಬಹಳ ದೊಡ್ಡ ವೀಕ್ಷಕ ವರ್ಗವನ್ನು ಬಹಳ ಕಡಿಮೆ ಅವಧಿಯಲ್ಲಿಯೇ ತನ್ನದಾಗಿಸಲು ಯಶಸ್ವಿಯಾಗಿದೆ. ಹೆಚ್ಚಿನ ವೀಕ್ಷಕ ವರ್ಗವನ್ನು ಹೊಂದಿರುವ ವಾಹಿನಿಯತ್ತ ಜಾಹೀರಾತುದಾರರು ಸಾಮಾನ್ಯವಾಗಿ ಕ್ಷಿಪ್ರಗತಿಯಲ್ಲಿ ಆಕರ್ಷಿತರಾಗುತ್ತಾರೆ. ತಮ್ಮ ಬ್ರಾಂಡ್‌ನ ಉತ್ಫನ್ನಗಳ ಪ್ರಚಾರಕ್ಕೆ ಜಾಹೀರಾತು ಕಂಪನಿಗಳು ಮುಗಿಬೀಳುತ್ತದೆ. ಇದನ್ನೇ ಸುಸಂದರ್ಭ ಎಂದು ಉಪಯೋಗಿಸಿಕೊಳ್ಳುವ ವಾರ್ತಾವಾಹಿನಿಗಳು ಸಂಪರ್ಕಜಾಲವನ್ನು ವಿಸ್ತರಿಸಿಕೊಳ್ಳುವತ್ತಾ ತಮ್ಮ ಚಿತ್ತವನ್ನು ಹರಿಸುತ್ತದೆ. ಇವೆಲ್ಲವೂ ಸಾಧ್ಯವಾಗಿರುವುದು ನಾಗರಿಕ ಪತ್ರಿಕೋದ್ಯಮದಿಂದ.
ಮಾಹಿತಿ ಹಕ್ಕು ಕಾಯ್ದೆ ಮತ್ತು ನಾಗರಿಕ ಪತ್ರಿಕೋದ್ಯಮ ನಿಜವಾದ ಅರ್ಥದಲ್ಲಿ ಅಧಿಕಾರವನ್ನು ಜನರ ಕೈಗೆ ನೀಡಿದೆ. ದುರ್ಗಮ ಪ್ರದೇಶಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರಮುಖ ಘಟನಾವಳಿಗಳನ್ನು ಗಮನಕ್ಕೆ ತರಲು ನಾಗರಿಕ ವರದಿಗಾರ ತನ್ನ ಲೇಖನದಿಂದ, ವರದಿಯಿಂದ ನೆರವಾಗುತ್ತಾನೆ. ಇದು ಸಾಮಾನ್ಯ ಜನರ ಹಿತದೃಷ್ಟಿಯಿಂದ ಅತ್ಯಾವಶ್ಯಕ ಕಾರ್ಯವಾಗಿದೆ.
ನಾಗರಿಕ ಪತ್ರಿಕೋದ್ಯಮದ ಮಹತ್ವನ್ನು ಅರಿಯಲು ಕೆಲವೊಂದು ಘಟನೆಗಳನ್ನು ಮೆಲುಕು ಹಾಕೋಣ. ಭಾಗಲ್‌ಪುರ ಎನ್ನುವುದು ಬಿಹಾರ ರಾಜ್ಯದಲ್ಲಿರುವ ಒಂದು ಸಣ್ಣ ಪಟ್ಟಣ. ಇಲ್ಲಿ ಸರಗಳ್ಳನೋರ್ವನನ್ನು ಹಿಡಿದ ಗುಂಪೊಂದು ಆತನನ್ನು ಚೆನ್ನಾಗಿ ಥಳಿಸಿತು. ಆ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಹ ಆತನನ್ನು ಮನಸ್ಸೊ ಇಚ್ಛೆ ಥಳಿಸಿದರು. ಓರ್ವ ಪೊಲೀಸ್ ಸರಗಳ್ಳನನ್ನು ತನ್ನ ಬೈಕ್‌ಗೆ ಕಟ್ಟಿಹಾಕಿ ಕೆಲ ದೂರದವರೆಗೂ ಬೈಕ್ ಚಲಾಯಿಸುತ್ತಾ ಆತನನ್ನು ಎಳೆದು ರಸ್ತೆಯಲ್ಲಿಯೇ ಎಳೆದುಕೊಂಡು ಹೋದ. ಈ ಅಮಾನವೀಯ ಘಟನೆಯ ದೃಶ್ಯವನ್ನು ನಾಗರಿಕ ಪತ್ರಕರ್ತನೋರ್ವ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದ. ಈ ಛಾಯಾಚಿತ್ರಗಳು ರಾಷ್ಟ್ರದ ಗಮನ ಸೆಳೆದವು. ಮಾಧ್ಯಮಗಳಲ್ಲಿ ಈ ಕುರಿತ ವಿಸ್ತಾರವಾದ ವರದಿಗಳು ನಂತರವಷ್ಟೇ ಪ್ರಸಾರವಾದವು. ಈ ಘಟನೆಗೆ ರಾಷ್ಟ್ರವ್ಯಾಪಿ ಖಂಡನೆ ವ್ಯಕ್ತವಾಯಿತು. ಕಾನೂನು ಪಾಲಕರೇ ಕಾನೂನನ್ನೇ ಕೈಗೆತ್ತಿಕೊಂಡ ಪ್ರಕರಣವು ಬಿಹಾರ ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿತು. ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯು ಪ್ರಕರಣದಲ್ಲಿ ಎದ್ದು ಕಾಣುತ್ತಿತ್ತು. ಹೀಗಾಗಿ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಪೊಲೀಸ್ ಪೇದೆ ವಿರುದ್ಧ ಸರಕಾರ ಕ್ರಮ ತೆಗೆದುಕೊಂಡಿತು. ಬೆಂಗಳೂರಿನ ಕಾರ್ಲ್‌ಟನ್ ಕಟ್ಟಡಕ್ಕೆ ಬೆಂಕಿ ಬಿದ್ದಾಗ ಮಾಧ್ಯಮಗಳಿಗೆ ಈ ಸುದ್ದಿ ದೊರಕಿದ್ದು ನಾಗರಿಕನಿಂದ.
ಶಂಶೀರ್ ಬುಡೋಳಿ |
ಹವ್ಯಾಸಿ ಪತ್ರಿಕೋದ್ಯಮ ಹಾಗೂ ನಾಗರಿಕ ಪತ್ರಿಕೋದ್ಯಮವೆಂಬುದು ಒಂದೇ ಅಂತ ಹೇಳಬಹುದು. ಈ ಹಿಂದೆ ಹವ್ಯಾಸಿ ಪತ್ರಕರ್ತರು ಏನು ಮಾಡುತ್ತಿದ್ದರೋ ಅದನ್ನೇ ಇವತ್ತು ನಾಗರಿಕ ಪತ್ರಕರ್ತ ಹೊಸ ಹೆಸರಿನಲ್ಲಿ ಸುದ್ದಿ, ಲೇಖನ ಬರೆಯುತ್ತಿದ್ದಾರಷ್ಟೇ. ಅಂದಿನ ಫ್ರಿಲಾನ್ಸ್ ಇವತ್ತು ಸಿಟಿಝನ್ ಜರ್ನಲಿಸಂ ಆಗಿದೆ. ಮಾಧ್ಯಮ ಜಗತ್ತಿನ ಆಧುನಿಕ ಬಿಸಿಗಾಳಿಯಾಗಿರುವ ನಾಗರಿಕ ಪತ್ರಿಕೋದ್ಯಮವೆಂಬುದು ನಾಗರಿಕರಿಂದ ನಾಗರಿಕೋಸ್ಕರ ರೂಪಿತವಾಗಿರುವ ಪತ್ರಿಕೋದ್ಯಮವಾಗಿದೆ. ಅಂದರೆ ಯಾವ ಪದವಿ ಇಲ್ಲದೆಯೂ ನಾಗರಿಕನೋರ್ವ ಪತ್ರಕರ್ತರಾಗುವ ಪರಿಕಲ್ಪನೆಯಾಗಿದೆ. ಮೊಬೈಲ್, ಅಂತರ್ಜಾಲಗಳ ಮೂಲಕ ನಾಗರಿಕ ಪತ್ರಕರ್ತನೋರ್ವ ಯಾವ ರೀತಿ ಗಮನ ಸೆಳೆಯುತ್ತಾನೆ ಎಂಬುದಕ್ಕೆ ಸುನಾಮಿಯಂತಹ ಸುದ್ದಿಗಳೇ ಸಾಕ್ಷಿ. ಸುನಾಮಿಯಂತಹ ದುರಂತ ಮೊದಲು ಬಿತ್ತರಗೊಂಡದ್ದು ಟ್ವಿಟ್ಟರ್ ಮೂಲಕ. ಬ್ಲಾಗ್, ಟ್ವಿಟ್ಟರ್, ಫೇಸ್‌ಬುಕ್ ಹೀಗೆ ಅಂತರ್ಜಾಲದಲ್ಲಿ ಕೈಯಾಡಿಸುತ್ತಿರುವ ನಾಗರಿಕ ಪತ್ರಕರ್ತ ಸುದ್ದಿಯ ನಾಡಿ ಹಿಡಿಯಬಲ್ಲ ಎರಡನೆ ಪತ್ರಕರ್ತ. ಇಂದಿನ ಕೆಲವು ಸುದ್ದಿ ಮಾಧ್ಯಮಗಳು ಕೇಂದ್ರಿಕೃತವಾಗಿರುವುದೇ ನಾಗರಿಕ ಪತ್ರಕರ್ತರಿಂದ.
ಎರಡು ದಶಕಗಳ ಹಿಂದೆ ಅಡಿಕೆ ಪತ್ರಿಕೆಯು ಕೃಷಿಕರ ಕೈಗೆ ಲೇಖನಿ ಕೊಡುವ ಮೂಲಕ ಅಂದಿನ ನಾಗರಿಕ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದನ್ನು ಮರೆಯಬಾರದು. ಹೊಸ ಪತ್ರಿಕೋದ್ಯಮದ ರೂಪವಾಗಿರುವ ನಾಗರಿಕ ಪತ್ರಿಕೋದ್ಯಮದಿಂದ ಧ್ವನಿ ಕಳೆದುಕೊಂಡಿದ್ದ ನಾಗರಿಕರು ಮತ್ತೆ ಧ್ವನಿ ಪಡೆಯುತ್ತಿದ್ದಾರೆ. ಪತ್ರಿಕೋದ್ಯಮಕ್ಕೆ ಮಹತ್ವದ ತಿರುವು ನೀಡಿ ನಿಮಿಷಾರ್ಧದಲ್ಲಿ ಸುದ್ದಿ ಬಿತ್ತರಗೊಳ್ಳಲು ಕಾರಣ ನಾಗರಿಕ ಪತ್ರಕರ್ತ. ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ನಾಗರಿಕ ಪತ್ರಿಕೋದ್ಯಮ ದೇಶದಲ್ಲಿ ಉತ್ತಮ ಮಟ್ಟದಲ್ಲಿ ಬೆಳೆಯುತ್ತಿದೆ. ಮುಂದೊಂದು ದಿನ ಮುಖ್ಯವಾಹಿನಿಯ ಪತ್ರಕರ್ತರ ಮತ್ತು ನಾಗರಿಕ ಪತ್ರಕರ್ತರ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟರೆ ಅಚ್ಚರಿಯೇನಲ್ಲ.
-ಶಂಶೀರ್ ಬುಡೋಳಿ
发表评论