ಮೇ.೧೯ರಂದು ನಡೆದ ಘಟನೆ: ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ನ್ಯಾಷನಲ್ ಸ್ಕೂಲ್ ಜಂಕ್ಷನ್ ಬಳಿ ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸಿದ ಮೈತ್ರೇಯಿ ಎಂಬ ಚಿತ್ರನಟಿಯ ಕಾರನ್ನು ಪೊಲೀಸ್ ಪೇದೆಯೊಬ್ಬರು ತಡೆಯುತ್ತಾರೆ. ಹಣವಿಲ್ಲ ಎಂಬ ಕಾರಣಕ್ಕೆ ತಕ್ಷಣ ದಂಡ ಕಟ್ಟಲು ಮೈತ್ರೇಯಿ ಮತ್ತು ಆಕೆಯ ಮೂವರು ಸಂಬಂಧಿಗಳು ನಿರಾಕರಿಸುತ್ತಾರೆ.

ಪೇದೆಗೂ ನಟಿಗೂ ಮಧ್ಯೆ ವಾಗ್ವಾದ ನಡೆಯುತ್ತದೆ. ನಟಿ ಮತ್ತು ಆಕೆಯ ಸಂಬಂಧಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತದೆ. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜೈಲಿಗೂ ಕಳುಹಿಸಲಾಗುತ್ತದೆ. ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಆರೋಪ ನಟಿಯ ಮೇಲೆ.

ಮೇ.೨೦ರಂದು ನಡೆದ ಇನ್ನೊಂದು ಘಟನೆ: ಕರ್ನಾಟಕ ಸರ್ಕಾರದ ಗೃಹ ಸಚಿವ ಆರ್.ಅಶೋಕ್ ಅವರ ಪುತ್ರ ಅಜಯ್ ಎಂಬುವವರು ಸಂಜೆ ಏಳರ ಸುಮಾರಿಗೆ ಫ್ರೇಜರ್‌ಟೌನ್ ವ್ಯಾಪ್ತಿಯ ಹೇನ್ಸ್ ರಸ್ತೆ ಜಂಕ್ಷನ್ ಬಳಿ ಒಂದು ಅಪಘಾತ ಪ್ರಕರಣದಲ್ಲಿ ಪಾಲ್ಗೊಳ್ಳುತ್ತಾರೆ. ಅಜಯ್ ಅವರ ಕಾರು ಒಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ. ಬೈಕ್ ಸವಾರ ಕೆಳಗೆ ಬೀಳುತ್ತಾನೆ. ಅಜಯ್ ಮತ್ತು ಅವರ ನಾಲ್ವರು ಗೆಳೆಯರು ಕಾರಿನಿಂದಿಳಿದು ಬೈಕ್ ಸವಾರನನ್ನು ಥಳಿಸತೊಡಗುತ್ತಾರೆ.

ಸ್ಥಳಕ್ಕೆ ಬರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಗುಂಪುಗೂಡಿದ ಜನರು ಅಜಯ್ ಮತ್ತು ಅವರ ಗೆಳೆಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಾರೆ. ಗೋಪಾಲಕೃಷ್ಣ ಅವರು ಅಜಯ್ ಮತ್ತು ಸಹಚರರನ್ನು ಪೊಲೀಸ್ ಠಾಣೆಗೆ ಬರುವಂತೆ ಹೇಳುತ್ತಾರೆ.


ಈ ಸಂದರ್ಭದಲ್ಲಿ ಮತ್ತೆ ಜಟಾಪಟಿಯಾಗುತ್ತದೆ. ಡೆಕ್ಕನ್ ಹೆರಾಲ್ಡ್ ವರದಿ ಹೇಳುವ ಪ್ರಕಾರ, ಗೋಪಾಲಕೃಷ್ಣ ಅವರ ಎದೆಗೆ ಗುದ್ದಿ ಮೂಲೆಗೆ ತಳ್ಳಲಾಗುತ್ತದೆ. ಹೊಯ್ಸಳ ವಾಹನದ ಮೂಲಕ ಠಾಣೆಗೆ ಅಜಯ್ ಮತ್ತು ಇತರರನ್ನು ಕರೆದೊಯ್ಯಲಾಗುತ್ತದೆ. ಯಾವುದೇ ಪ್ರಕರಣ ದಾಖಲಿಸದೇ ಅವರುಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಕಳೆದ ಎರಡು ಮೂರು ದಿನಗಳಿಂದ ಟಿವಿ ಚಾನಲ್‌ಗಳಲ್ಲಿ ಮೈತ್ರೇಯಿಯದ್ದೇ ಸುದ್ದಿ. ಆಕೆ ಅಳುತ್ತ ಟಿವಿ ಸ್ಟುಡಿಯೋಗಳಲ್ಲಿ ಕುಳಿತು ನಾನು ಪೇದೆಯನ್ನು ಥಳಿಸಿಯೇ ಇಲ್ಲ. ಗುಂಪಿನಲ್ಲಿದ್ದ ಯಾರೋ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಗುಂಪಿನಲ್ಲಿದ್ದವರು ನಮ್ಮೆಲ್ಲರ ಮೇಲೂ ಹೇಳಲು ಸಾಧ್ಯವಿಲ್ಲದಂತೆ ನಡೆದುಕೊಂಡಿದ್ದಾರೆ. ಯಾಕೆ ನಮ್ಮನ್ನು ಬಲಿಪಶು ಮಾಡಲಾಯಿತೋ ಗೊತ್ತಿಲ್ಲ ಎನ್ನುತ್ತಿದ್ದಾರೆ.

ಎರಡೂ ಘಟನೆಗಳ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಕೆಲವು ಪ್ರಶ್ನೆಗಳಿವೆ.

ಯಾವ ದೃಷ್ಟಿಯಿಂದ ನೋಡಿದರೂ ಫ್ರೇಜರ್ ಟೌನ್‌ನಲ್ಲಿ ನಡೆದ ಘಟನೆ ಹೆಚ್ಚು ಮಹತ್ವದ್ದು. ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಡೆದ ಘಟನೆ ಸಿಗ್ನಲ್ ಜಂಪ್‌ಗೆ ಸಂಬಂಧಿಸಿದರೆ, ಫ್ರೇಜರ್ ಟೌನ್ ಘಟನೆ ಅಪಘಾತಕ್ಕೆ ಸಂಬಂಧಿಸಿದ್ದು. ಮೊದಲ ಪ್ರಕರಣದ ಆರೋಪಿ ಸಿನಿಮಾ ನಟಿಯಾದರೆ, ಎರಡನೇ ಪ್ರಕರಣದ ಆರೋಪಿ ಈ ರಾಜ್ಯದ ಗೃಹ ಸಚಿವರ ಪುತ್ರ.

ಪ್ರಶ್ನೆಗಳು ಇವು:
ಫ್ರೇಜರ್ ಟೌನ್ ಪ್ರಕರಣದ ಕುರಿತು ಡೆಕ್ಕನ್ ಹೆರಾಲ್ಡ್‌ನಲ್ಲಿ ಘಟನೆಯ ಪೂರ್ತಿ ವಿವರವಿದೆ. ಪ್ರಜಾವಾಣಿಯಲ್ಲೂ ವರದಿ ಇದೆಯಾದರೂ ಯಾವ ಸಚಿವ, ಏನು ಎಂಬುದಿಲ್ಲ. ಮಿಕ್ಕಂತೆ ಯಾವ ಪತ್ರಿಕೆಗಳಲ್ಲೂ ಈ ಕುರಿತು ವಿಸ್ತ್ರತ ವರದಿ ಬಂದಹಾಗೆ ಕಾಣಲಿಲ್ಲ. ಯಾಕೆ, ಹೇಗೆ ಈ ವರದಿ ಇತರ ಪತ್ರಿಕೆಗಳಲ್ಲಿ ಮಿಸ್ ಆಯಿತು? ಅಥವಾ ಪ್ರಾಧಾನ್ಯತೆ ಕಳೆದುಕೊಂಡಿತು?

ಮೈತ್ರೇಯಿ ಪ್ರಕರಣವನ್ನು ಎಳೆದಾಡುತ್ತಿರುವ ಟಿವಿ ಚಾನಲ್‌ಗಳು ಅಜಯ್ ಪ್ರಕರಣವನ್ನೇಕೆ ಚರ್ಚೆಗೆ ಕೈಗೆತ್ತಿಕೊಳ್ಳುತ್ತಿಲ್ಲ? ಕನಿಷ್ಠ ಮೈತ್ರೇಯಿ ಪ್ರಕರಣದ ಜತೆಯೇ ಈ ಘಟನೆಯನ್ನು ಚರ್ಚಿಸದೇ ಹೋದದ್ದು ಏಕೆ?

ನಿಜ, ಫ್ರೇಜರ್ ಟೌನ್ ಘಟನೆ ಸಂಬಂಧ ಪ್ರಕರಣ ದಾಖಲಾಗಿಲ್ಲ. ಠಾಣೆಯಲ್ಲಿ ದಾಖಲಾಗದ ಪ್ರಕರಣಗಳು ಸುದ್ದಿಯಾಗುವುದೇ ಇಲ್ಲವೇ? ಸುದ್ದಿಯಾಗಲೇಬಾರದೆ? ಘಟನೆಯಲ್ಲಿ ಗೃಹ ಮಂತ್ರಿಯ ಪುತ್ರ ಇದ್ದಿದ್ದನ್ನು ಬೆಂಗಳೂರು ಪೊಲೀಸ್ ಆಯುಕ್ತರೇ ಖಚಿತಪಡಿಸಿದ್ದಾರೆ. ಇಷ್ಟಾದ ಮೇಲೂ ಇದು ಸುದ್ದಿಯಲ್ಲವೇ?

ಮಹಿಳೆಯರು ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದರು ಎಂಬುದನ್ನು ಸುದ್ದಿ ಮಾಡಿದ ವರದಿಗಾರರಿಗೆ ಈ ಸುದ್ದಿ ಏಕೆ ಕಾಣಲಿಲ್ಲ. ಕೆಲ ಚಾನೆಲ್ ಗಳು ಈ ಸುದ್ದಿಯನ್ನು ತೀರಾ ಸಣ್ಣ ಸುದ್ದಿಯಂತೆ ಟ್ರೀಟ್ ಮಾಡಿವೆ. ಯಾಕೆ ಹೀಗೆ? ಸುಂದರ ಹುಡುಗಿಯರು ಇವರಿಗೆ ಈಜಿ ಟಾರ್ಗೆಟ್ ಆದರಾ?
0 komentar

Blog Archive