ಪ್ರಜಾವಾಣಿಯ ನಿವೃತ್ತ ಸಹಾಯಕ ಸಂಪಾದಕ ಹಾಗು ಸಾಹಿತಿ ರಂಜಾನ್ ದರ್ಗಾ ಅವರು ಎರಡು ಘಟನೆಗಳು: ಉತ್ತರಿಸಲು ಸಾಧ್ಯವಾಗದ ಹಲವು ಪ್ರಶ್ನೆಗಳು ಎಂಬ ಲೇಖನಕ್ಕೆ ನೀಡಿರುವ ಒಂದು ಪ್ರತಿಕ್ರಿಯೆ ಗಂಭೀರ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ. ಮೀಡಿಯಾ ಸಂಸ್ಥೆಗಳ ಮಾಲೀಕರು ಪತ್ರಕರ್ತರಿಗೆ ಕೊಡಲಾಗುವ ಪ್ರಶಸ್ತಿಗಳನ್ನು ಪಡೆಯುವುದು ಸರಿಯೇ ಎಂಬುದು ಈ ಬಹುಮುಖ್ಯವಾದ ಪ್ರಶ್ನೆ.

ನಿಜ, ಇಂಥದ್ದೊಂದು ಟ್ರೆಂಡ್ ಚಾಲ್ತಿಯಲ್ಲಿದೆ. ಇದನ್ನು ನಾವು ಸಬ್ಜೆಕ್ಟಿವ್ ಆಗಿ ಚರ್ಚಿಸುವುದು ಒಳ್ಳೆಯದು ಅನಿಸುತ್ತದೆ. ಹಿಂದೆ ಹೀಗೆ ಪ್ರಶಸ್ತಿ ಪಡೆದವರು ಯಾರು? ಯಾಕೆ? ಹೇಗೆ? ಇತ್ಯಾದಿ ಪ್ರಶ್ನೆಗಳು ಸದ್ಯಕ್ಕೆ ಇಲ್ಲಿ ಬೇಕಾಗಿಲ್ಲ. ಮಾಲೀಕರು ಪತ್ರಕರ್ತರ ಹೆಸರಿನ ಪ್ರಶಸ್ತಿ ಪಡೆಯುವುದು ಸರಿಯೇ ತಪ್ಪೇ ಎಂಬುದಷ್ಟೇ ನಮ್ಮ ಚರ್ಚೆಯ ವಿಷಯವಾಗಲಿ ಎಂಬುದು ನಮ್ಮ ಇಂಗಿತ.

ರಂಜಾನ್ ದರ್ಗಾ
ಮಾಧ್ಯಮ ಕ್ಷೇತ್ರಕ್ಕೆ ನೀಡಲಾಗುವ ಪ್ರಶಸ್ತಿಗಳನ್ನು ಪತ್ರಿಕಾ ಸಂಸ್ಥೆಗಳ ಮಾಲೀಕರಿಗೆ ನೀಡುವುದು ಸರ್ಕಾರಕ್ಕೆ ಮತ್ತು ಸರ್ಕಾರದ ಅಧೀನದಲ್ಲಿರುವ ಮಾಧ್ಯಮ ಅಕಾಡೆಮಿಯಂಥ ಸಂಸ್ಥೆಗಳಿಗೆ ಅತ್ಯಂತ ಸುಲಭದ, ಲಾಭದಾಯಕ ತೀರ್ಮಾನವಾಗಬಹುದು. ಇತ್ತೀಚಿಗೆ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ನೀಡುವ ಮೂಲಕ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವ ಕ್ರಿಯೆಯೇ ಕಣ್ಣಿಗೆ ರಾಚುವಂತೆ ಕಂಡುಬರುತ್ತಿದೆ. ಕಳೆದ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಕರ್ತರನ್ನು ಆಯ್ಕೆ ಮಾಡುವ ಅನುಭವ, ಹಿರಿತನ, ಯೋಗ್ಯತೆಗಳಿಗಿಂತ ಹೆಚ್ಚಾಗಿ ಮಾಧ್ಯಮ ಕ್ಷೇತ್ರಗಳಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿರುವವರನ್ನೇ ಪರಿಗಣಿಸಿದ್ದನ್ನು ನಾವು ಗಮನಿಸಿದ್ದೇವೆ. ಮಾತ್ರವಲ್ಲದೆ ಪ್ರತಿ ಮಾಧ್ಯಮಕ್ಕೂ ಒಂದು ಪ್ರಶಸ್ತಿ ಎಂಬಂಥ ವಿಚಿತ್ರ ಮಾನದಂಡವನ್ನಿಟ್ಟುಕೊಂಡು ಪ್ರಶಸ್ತಿಗಳನ್ನು ಹಂಚಿದ್ದು ಢಾಳಾಗಿ ಕಾಣಿಸಿತು. ಸರ್ಕಾರ ಹೀಗೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ತನ್ನ ಲಾಭ-ನಷ್ಟದ ಲೆಕ್ಕಾಚಾರಗಳನ್ನು ಯೋಚಿಸುವಾಗ ಸಹಜವಾಗಿಯೇ ಮಾಧ್ಯಮ ಸಂಸ್ಥೆಗಳ ಒಟ್ಟಾರೆ ಹೊಣೆ ಹೊತ್ತ ಮಾಲೀಕರನ್ನು ಆಯ್ಕೆ ಮಾಡುವುದು ಅತ್ಯಂತ ಸಲೀಸಾದ ನಿರ್ಧಾರವಾಗಬಹುದು.

ಇಲ್ಲಿ ಎರಡು ಬಹುಮುಖ್ಯ ಪ್ರಶ್ನೆಗಳಿವೆ. ಒಂದು, ಪತ್ರಕರ್ತರ ಪ್ರಶಸ್ತಿಯನ್ನು ಸಂಸ್ಥೆಗಳ ಮಾಲೀಕರು, ಮ್ಯಾನೇಜ್‌ಮೆಂಟ್ ಹುದ್ದೆಗಳಲ್ಲಿರುವವರು ಪಡೆಯುವುದು ತಾಂತ್ರಿಕವಾಗಿ ಎಷ್ಟು ಸರಿ ಎಂಬುದು ಮೊದಲ ಪ್ರಶ್ನೆ. ಪತ್ರಿಕಾ ಸಂಸ್ಥೆಗಳ ಮಾಲೀಕರು ಪತ್ರಿಕೋದ್ಯಮಿಗಳೇ ಹೊರತು ಸಂಬಳ ಪಡೆದು ಹಗಲು-ರಾತ್ರಿ ದುಡಿಯುವ ಪತ್ರಕರ್ತರಾಗಿರುವುದಿಲ್ಲ. ಪತ್ರಿಕೋದ್ಯಮಿಗಳೇ ಪತ್ರಕರ್ತರಾಗಿರುವ ಸಣ್ಣ ಪತ್ರಿಕೆಗಳ ಮಾಲೀಕರಿದ್ದಾರೆ, ಅವರ ವಿಷಯ ಬೇರೆ. ಇವರು ಡಿಟಿಪಿ ಮಾಡುವುದರಿಂದ (ಹಿಂದೆ ಮೊಳೆ ಜೋಡಿಸುವುದರಿಂದ) ಹಿಡಿದು ಪೇಪರ್ ಬಂಡಲ್ ಹೊರುವವರೆಗೆ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ನಾವು ಇವರ ವಿಷಯ ಚರ್ಚಿಸುತ್ತಿಲ್ಲ. ದೊಡ್ಡ ಮಾಧ್ಯಮಗಳ ಮಾಲೀಕರು ರಿಪೋರ್ಟಿಂಗ್ ಮಾಡುವವರಲ್ಲ, ಕಾಪಿ ತಿದ್ದುವವರಲ್ಲ, ವಿನ್ಯಾಸ ಮಾಡುವವರಲ್ಲ, ಮತ್ತೊಂದು-ಮಗದೊಂದು ಮಾಡುವವರಲ್ಲ. ಹೀಗಿರುವಾಗ ಇವರು ಪತ್ರಕರ್ತರ ಪ್ರಶಸ್ತಿಯನ್ನು ಪಡೆಯುವುದು ತಾಂತ್ರಿಕವಾಗಿ ಎಷ್ಟು ಸರಿ? ಪತ್ರಿಕಾ ಸಂಸ್ಥೆಗಳ ಮಾಲೀಕರನ್ನು ಉದ್ಯಮಿಗಳು ಎಂದೇ ಪರಿಗಣಿಸಿ ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಗಳಿಗೆ ಆಯ್ಕೆ ಮಾಡುವುದು ಸರಿಯಾದ ಮಾರ್ಗವಲ್ಲವೆ?

ಎರಡನೆಯದು ನೈತಿಕ ಪ್ರಶ್ನೆ. ಮಾಧ್ಯಮ ಸಂಸ್ಥೆಯ ಮಾಲೀಕರು, ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರಶಸ್ತಿ ಪಡೆದರೆ, ಒಬ್ಬ ಪತ್ರಕರ್ತನಿಗೆ ನ್ಯಾಯಯುತವಾದ ಹಕ್ಕನ್ನು ಕಿತ್ತುಕೊಂಡಂತಾಗುವುದಿಲ್ಲವೆ?

ಇದು ಪ್ರಶಸ್ತಿಗಳಿಗೆ ಮಾತ್ರವಲ್ಲ, ಪತ್ರಕರ್ತರಿಗೆ ದೊರೆಯುವ ಎಲ್ಲ ಸೌಲಭ್ಯಗಳಿಗೂ ಅನ್ವಯಿಸಿಕೊಂಡು ನಾವು ನೋಡಬಹುದಾಗಿದೆ.

ದಯವಿಟ್ಟು ಈ ಚರ್ಚೆಯಲ್ಲಿ ಪಾಲ್ಗೊಳ್ಳಿ ಮತ್ತು ಓಟ್ ಮಾಡಿ. ಚರ್ಚೆ ವ್ಯಕ್ತಿಗಳ, ಸಂಸ್ಥೆಗಳ ಸುತ್ತ ಹರಿದಾಡುವ ಬದಲು ವಿಷಯದ ಸುತ್ತಲೇ ಇರಲಿ ಎಂಬುದು ನಮ್ಮ ಮನವಿ.

0 komentar

Blog Archive