ಹಾನಗಲ್‌ನ ಪ್ರಭಾಕರ್ ಸುದ್ದಿಯಾಗುತ್ತಿದ್ದಂತೆ, ಪತ್ರಕರ್ತ ಚಾಮರಾಜ ಸವಡಿ ಗುಳೆ ಹೋಗುವ ಅಸಹಾಯಕ ಜನರ ಕುರಿತು ತಾವು ಹಿಂದೆ ಬರೆದ ಲೇಖನವೊಂದನ್ನು ತಮ್ಮ ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾರೆ. ಆ ಲೇಖನದ ಯಥಾವತ್ತು ಇಲ್ಲಿದೆ. ಇಂಥ ಹಲವು ಕಥೆಗಳು ಅವರ ಬ್ಲಾಗ್‌ನಲ್ಲಿವೆ. ಒಮ್ಮೆ ಚಾಮರಾಜ ಸವಡಿ ಎಂಬ ಅವರ ಬ್ಲಾಗ್‌ಗೆ ಭೇಟಿ ಕೊಡಿ.- ಸಂಪಾದಕೀಯ

(ಈ ಬರಹ ನವೆಂಬರ್ ೨೦೦೯ರಲ್ಲಿ ಬರೆದಿದ್ದು. ಇದನ್ನು ಮತ್ತೊಮ್ಮೆ ನಿಮ್ಮ ಮುಂದೆ ತರಲು ಸಂಪಾದಕೀಯ ಬ್ಲಾಗ್‌ನ  ಹಾನಗಲ್ ಪ್ರಭಾಕರನ ಪೂರ್ತಿ ವಿವರ, ಶಾಂತವ್ವಳ ನೋವಿನ ಕಥೆ... ಎಂಬ ಬರಹ ಕಾರಣ. ಹೀಗಾಗಿ, ಈ ಬರಹವನ್ನು ಸಂಪಾದಕೀಯ ಬ್ಲಾಗ್‌ಗೆ ಅರ್ಪಿಸುತ್ತಿದ್ದೇನೆ...)

ಹಲವು ವರ್ಷಗಳ ಹಿಂದಿನ ಘಟನೆ.

ಆಗ ನಾನು ಬೆಂಗಳೂರಿನ ಎಲ್ಲಾ ನಂಟನ್ನು ಕಡಿದುಕೊಂಡು, ಇನ್ನು ಮುಂದೆ ನಮ್ಮೂರಲ್ಲೇ ಏನಾದರೂ ಮಾಡಬೇಕೆಂದು ಕೊಪ್ಪಳಕ್ಕೆ ಬಂದು ಪೂರ್ಣಪ್ರಮಾಣದ ನಿರುದ್ಯೋಗಿಯಾಗಿದ್ದೆ. ನನ್ನ ಬಂಡವಾಳವೇನಿದ್ದರೂ ತಲೆಯಲ್ಲಿತ್ತೇ ಹೊರತು ಜೇಬಿನಲ್ಲಿರಲಿಲ್ಲ. ಸಹಜವಾಗಿ ಕೊಪ್ಪಳ ನನ್ನನ್ನು ತಿರಸ್ಕರಿಸಿತು. ಯಾರಾದರೂ ಸರಿ, ದುಡ್ಡಿಲ್ಲದಿದ್ದರೆ ಅವನು ತಿರಸ್ಕಾರಕ್ಕೇ ಯೋಗ್ಯ. ಜಗತ್ತಿಗೆ ಸುಲಭವಾಗಿ ಅರ್ಥವಾಗುವ ಭಾಷೆಗಳೆಂದರೆ ಎರಡೇ- ಒಂದು ಹಣ, ಇನ್ನೊಂದು ಬೆದರಿಕೆ. ನನ್ನ ಹತ್ತಿರ ಎರಡೂ ಇಲ್ಲದಿದ್ದರಿಂದ ಪತ್ರಿಕೆಯೊಂದನ್ನು ಪ್ರಾರಂಭಿಸಬೇಕೆನ್ನುವ ನನ್ನ ಆಸೆಗೆ ಯಾವ ಬೆಂಬಲವೂ ಸಿಗಲಿಲ್ಲ. ಯಾರಾದರೂ ಬಂಡವಾಳಶಾಹಿಗಳು ಮುಂದೆ ಬಂದರೆ, ಅಚ್ಚುಕಟ್ಟಾದ ದಿನಪತ್ರಿಕೆಯೊಂದನ್ನು ರೂಪಿಸಿಕೊಟ್ಟೇನೆಂದು ನಾನು ಹಂಬಲಿಸುತ್ತಿದ್ದೆ. ಆದರೆ ದುಡ್ಡು ಹಾಕುವ ಹಂಬಲ ಮಾತ್ರ ಕೊಪ್ಪಳದ ಯಾವ ಬಂಡವಾಳಗಾರನಲ್ಲೂ ಇರಲಿಲ್ಲ. ಅಂಥವರ ಪರಿಚಯ ಕೂಡಾ ನನಗಿರಲಿಲ್ಲ.

ಹಾಗಿದ್ದರೂ ನನ್ನಲ್ಲೊಂದು ಆತ್ಮವಿಶ್ವಾಸವಿತ್ತು. ಏನಾದರೂ ಮಾಡಿ ಕೊಪ್ಪಳದಲ್ಲಿ ಪತ್ರಿಕೆಯೊಂದನ್ನು ಹುಟ್ಟು ಹಾಕಬೇಕೆನ್ನುವ ತುಡಿತವಿತ್ತು. ಕಾಲ ಪಕ್ವವಾಗುವವರೆಗೆ ಏನಾದರೂ ಮಾಡಬೇಕಲ್ಲವೇ? ವಾಪಸ್ ಬೆಂಗಳೂರಿಗೆ ಹೋಗುವ ಮನಸ್ಸಿಲ್ಲದ್ದರಿಂದ ಕೊಪ್ಪಳದಲ್ಲೇ ಮಾಡುವಂಥ ಕೆಲಸವನ್ನು ಹಿಡಿಯಬೇಕಿತ್ತು. ಆಗ ಸಹಾಯಕ್ಕೆ ಬಂದಿದ್ದು ಟ್ಯೂಷನ್.

ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವಂತೆ ಕೊಪ್ಪಳದಲ್ಲಿಯೂ ಆಗ ಇಂಗ್ಲಿಷ್ ಟ್ಯೂಶನ್ ಕ್ರಾಂತಿ. ಯಾವ ಓಣಿಗೆ ಹೊಕ್ಕರೂ ಅಲ್ಲೊಂದು ಟ್ಯುಟೇರಿಯಲ್ಲು, ಯಾವ ನಿರುದ್ಯೋಗಿಯನ್ನು ನೋಡಿದರೂ ಆತನದೊಂದು ಟ್ಯೂಶನ್ ಬ್ಯಾಚ್ ಇರುತ್ತಿತ್ತು. ಆದರೆ, ಪರಿಚಿತರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದ ನನ್ನ ಪಾಲಿಗೆ ವಿದ್ಯಾರ್ಥಿಗಳು ಸಿಗುವುದು ಸಾಧ್ಯವೇ ಇರಲಿಲ್ಲ.

ಹೀಗಾಗಿ ನಾನು ಕೊಪ್ಪಳದಿಂದ ೨೨ ಕಿಮೀ ದೂರದ ಯಲಬುರ್ಗಾ ತಾಲ್ಲೂಕಿನ ಮಂಗಳೂರಿಗೆ ಟ್ಯೂಶನ್ ಹೇಳಲು ಹೋಗುವುದು ಅನಿವಾರ್ಯವಾಯಿತು. ಸುಮಾರು ಎಂಟು ತಿಂಗಳುಗಳ ಕಾಲ ನಾನು ಅಲ್ಲಿದ್ದೆ. ಟ್ಯೂಶನ್ ಹೇಳುತ್ತಲೇ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ನನ್ನ ಬೆಂಗಳೂರಿನ ನೆನಪುಗಳ ಪೈಕಿ ಒಂದಷ್ಟನ್ನು ಬರೆದಿಟ್ಟುಕೊಂಡೆ. ಬೆಂಗಳೂರು ಅಷ್ಟೆಲ್ಲಾ ದಿನಗಳಲ್ಲಿ ನನಗೆ ಏನೆಲ್ಲವನ್ನೂ ಕಲಿಸಿತ್ತೋ, ಅಷ್ಟೇ ಪ್ರಮಾಣದ ಪಾಠವನ್ನು ಮಂಗಳೂರು ನನಗೆ ಎಂಟೇ ತಿಂಗಳುಗಳ ಕ್ಲುಪ್ತ ಅವಧಿಯಲ್ಲಿ ಕಲಿಸಿತ್ತು.

ಆಗಾಗ ಇಂಥ ಅಜ್ಞಾತವಾಸಗಳಿಗೆ ಹೊರಟು ಹೋಗುವುದು ಒಂದರ್ಥದಲ್ಲಿ ಒಳ್ಳೆಯದೇ ಎಂದು ಈಗಲೂ ನಾನು ನಂಬುತ್ತೇನೆ. ಎಲ್ಲಾ ರೀತಿಯ ಒಂಟಿತನ ನಮ್ಮೊಳಗಿನ ಅಸಲಿ ವ್ಯಕ್ತಿತ್ವವನ್ನು ಹೊರ ಹಾಕುತ್ತದೆ. ಯಾರು ಒಳ್ಳೆಯವರು? ಕೆಟ್ಟವರು ಯಾರು? ನಮ್ಮೊಳಗಿನ ನಿಜವಾದ ಶಕ್ತಿ ಏನು? ದೌರ್ಬಲ್ಯಗಳು ಯಾವುವು? ನಮ್ಮ ವಲಯದ ಸಮಯಸಾಧಕರು ಯಾರು? ಅವರ ಕಾರ್ಯತಂತ್ರಗಳೆಂಥವು? ಮುಂದಿನ ದಿನಗಳಲ್ಲಿ ನಾನು ಯಾರನ್ನು ನಂಬಬಹುದು? ಯಾರನ್ನು ಕೈ ಬಿಡಬೇಕು? ಯಾರನ್ನು ಪೂರ್ತಿಯಾಗಿ ದೂರವಿಡಬೇಕು? ಎಂಬ ವಿಷಯಗಳು ಅಜ್ಞಾತವಾಸದ ಅವಧಿಯಲ್ಲಿ ಚೆನ್ನಾಗಿ ಗೊತ್ತಾಗುತ್ತವೆ.

ಮಂಗಳೂರಿನ ಎಂಟು ತಿಂಗಳುಗಳ ಆವಧಿ ನನ್ನ ಅಂಥ ಅಜ್ಞಾತವಾಸಗಳ ಪೈಕಿ ಒಂದು.

ಆ ಸಂದರ್ಭದಲ್ಲಿ ನನ್ನ ಗೆಳೆಯರೆನಿಸಿಕೊಂಡವರಿಂದ, ಬಂಧುಗಳಿಂದ, ಹಿತೈಷಿಗಳಿಂದ ನಾನು ದೂರವಿದ್ದೆ. ಬೆಂಗಳೂರು ಬಿಟ್ಟು ಸಣ್ಣ ಹಳ್ಳಿಯಾದ ಮಂಗಳೂರಿಗೆ ಟ್ಯೂಶನ್ ಹೇಳಲು ಬಂದು ನಿಂತ ನನ್ನ ಬಗ್ಗೆ ಆಶಾದಾಯಕವಾಗಿ ಯೋಚಿಸುವ ವ್ಯಕ್ತಿಗಳ ಸಂಖ್ಯೆ ಆಗ ತುಂಬಾ ಕಡಿಮೆಯಿತ್ತು.

ನನಗೂ ಬೇಕಾಗಿದ್ದೂ ಅದೇ.

ನನ್ನ ನಿಜವಾದ ಮಿತ್ರರು ಯಾರು? ಹಿತೈಷಿಗಳು ಎಂಥವರು? ಭವಿಷ್ಯದ ದಿನಗಳಲ್ಲಿ ನಾನು ಯಾರನ್ನು ನಂಬಬಹುದು? ಎಂಬುದನ್ನು ಅರಿಯಲು ಅಜ್ಞಾತವಾಸ ನನಗೆ ತುಂಬಾ ಸಹಾಯ ಮಾಡಿತು. ಹಾಗೆ ನೋಡಿದರೆ ಪ್ರತಿಯೊಂದು ಅಜ್ಞಾತವಾಸವೂ ನನಗೆ ಒಳ್ಳೆಯ ಪಾಠ ಕಲಿಸಿದೆ. ಹೊಸ ಹೊಸ ಗೆಳೆಯರನ್ನು ತಂದು ಕೊಟ್ಟಿದೆ. ಯಾವ ರಿಸ್ಕುಗಳನ್ನು ತೆಗೆದುಕೊಳ್ಳಬಹುದು? ಅವನ್ನು ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬಹುದು? ಎಂಬುದನ್ನು ತೀರ್ಮಾನಿಸಲು ಸಹಾಯ ಮಾಡಿದೆ. ಆದ್ದರಿಂದ ನಾನು ಇಂಥ ಅಜ್ಞಾತವಾಸಗಳನ್ನು ಇಷ್ಟಪಡುತ್ತೇನೆ. ಆ ಅವಧಿ ಎಷ್ಟೇ ವೇದನಾಪೂರ್ಣವಾಗಿದ್ದರೂ ಕೂಡ ಅದನ್ನು ಆನುಭವಿಸಲು ಸಿದ್ಧನಾಗುತ್ತೇನೆ.

ಯಲಬುರ್ಗಾ ತಾಲ್ಲೂಕಿನ ಮಂಗಳೂರು ನನಗೆ ಗೆಳೆಯರನ್ನಷ್ಟೇ ಅಲ್ಲ, ಅನುಭವಗಳನ್ನು ಕೂಡಾ ದೊರಕಿಸಿಕೊಟ್ಟಿತು. ಆ ದಿನಗಳನ್ನು ನೆನಪಿಸಿಕೊಂಡರೆ ಇವತ್ತಿಗೂ ನಾನು ಮೌನವಾಗುತ್ತೇನೆ. ನನ್ನ ಅಹಂಕಾರ ತಾನಾಗಿ ಕಡಿಮೆಯಾಗುತ್ತದೆ. ಇದೆಲ್ಲಾ ನಶ್ವರ ಎಂಬ ವಿವೇಕ ಸುಲಭವಾಗಿ ಮೂಡುತ್ತದೆ. ಏಕೆಂದರೆ, ಮಂಗಳೂರಿನಲ್ಲಿ ನಾನು ನಿಜವಾದ ಬಡತನವನ್ನು ನೋಡಿದೆ. ಪ್ರತಿಯೊಂದು ವರ್ಷವೂ ಗುಳೆ ಹೋಗುವ ಕುಟುಂಬಗಳನ್ನು ಅಲ್ಲಿ ಕಂಡೆ. ಸರಕಾರಗಳು ಏನೇ ಘೋಷಿಸಲಿ, ಜನಪ್ರತಿನಿಧಿಗಳು ಎಷ್ಟೇ ಬಡಾಯಿ ಕೊಚ್ಚಿಕೊಳ್ಳಲಿ, ಅಧಿಕಾರಿಗಳು ಅದೆಷ್ಟೇ ಅಂಕಿ ಅಂಶಗಳನ್ನು ನೀಡಿ ನಂಬಿಸಲು ಪ್ರಯತ್ನಿಸಲಿ. ಒಂದು ಮಾತಂತೂ ಸತ್ಯ-

ನಮ್ಮ ಹಳ್ಳಿಗಳಲ್ಲಿ ತೀವ್ರವಾದ ಬಡತನವಿದೆ. ಒಂದೇ ಒಂದು ಬೆಳೆ ವಿಫಲವಾದರೂ ಸಾಕು - ಸಾವಿರಾರು ಕುಟುಂಬಗಳು ಗುಳೆ ಹೋಗಬೇಕಾಗುತ್ತದೆ.

ಅಂಥ ಒಂದಷ್ಟು ಕುಟುಂಬಗಳನ್ನು, ಅವು ಗುಳೆ ಹೋದ ದುರಂತವನ್ನು ನಾನು ಮಂಗಳೂರಿನಲ್ಲಿ ಕಣ್ಣಾರೆ ಕಂಡೆ. ಇದೆಲ್ಲಾ ನನ್ನ ಗಮನಕ್ಕೆ ಬಂದಿದ್ದು ಕೂಡ ತೀರಾ ಆಕಸ್ಮಿಕವಾಗಿ.

ಕಾಲೇಜು ಉಪನ್ಯಾಸಕರಾಗಿದ್ದ ಗೆಳೆಯ ರಾಜಶೇಖರ ಪಾಟೀಲ ಅವರ ರೂಮಿನಲ್ಲಿ ಇರುತ್ತಿದ್ದ ನಾನು ಟ್ಯೂಶನ್ ಕೂಡಾ ಅಲ್ಲಿಯೇ ನಡೆಸುತ್ತಿದ್ದೆ. ಒಬ್ಬ ಪಿಯುಸಿ ಹುಡುಗ ಆಗಾಗ ಟ್ಯೂಶನ್ ತಪ್ಪಿಸುವುದು ಒಮ್ಮೆ ನನ್ನ ಗಮನಕ್ಕೆ ಬಂದಿತು. ಅವನನ್ನು ಕರೆಸಿ ಕಾರಣ ವಿಚಾರಿಸಿದೆ. ಅವನಿಂದ ಸಮರ್ಪಕ ಉತ್ತರ ಬರಲಿಲ್ಲ. ಬೈದೆ. ಅವನು ದೂಸರಾ ಮಾತನಾಡದೇ ಬೈಸಿಕೊಂಡ. ಅವನು ಆಚೆ ಹೋದ ನಂತರ, ಗೆಳೆಯ ರಾಜಶೇಖರ ಪಾಟೀಲ ಜೊತೆ ಆ ಹುಡುಗ ಕ್ಲಾಸ್ ತಪ್ಪಿಸುವ ಬಗ್ಗೆ ಮಾತಾಡಿದೆ. ಅವನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ನಾನು ಟ್ಯೂಶನ್ ಫೀ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಈ ಹುಡುಗ ಚೆನ್ನಾಗಿ ಓದುವುದನ್ನು ಬಿಟ್ಟು ಇದೇನು ನಡೆಸಿದ್ದಾನೆ ನೋಡಿ ಎಂದು ದೂರಿದೆ.

ಒಂದು ಕ್ಷಣ ರಾಜಶೇಖರ ಪಾಟೀಲ್ ಮಾತಾಡಲಿಲ್ಲ. ನಂತರ ಉತ್ತರರೂಪವಾಗಿ ತಮ್ಮದೊಂದು ಅನುಭವ ಹೇಳಿದರು.

ಆ ಹುಡುಗ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು.

ಇಡೀ ತರಗತಿಯಲ್ಲಿ ಇವನೊಬ್ಬ ಮಾತ್ರ ಸರಿಯಾದ ಸಮಯಕ್ಕೆ ಫೀ ಕಟ್ಟುತ್ತಿರಲಿಲ್ಲ. ಸರಿಯಾಗಿ ತರಗತಿಗಳಿಗೂ ಬರುತ್ತಿರಲಿಲ್ಲ. ಕಾರಣ ಕೇಳಿದರೆ ಬಡತನದ ಬಗ್ಗೆ ಹೇಳುತ್ತಿದ್ದ. ಫೀಗಾಗಿ ಒತ್ತಾಯಿಸಿದರೆ ತರಗತಿಗಳಿಗೇ ಬರುತ್ತಿರಲಿಲ್ಲ ಹೀಗಾಗಿ ಅವನ ಬಗ್ಗೆ ಸಹೃದಯಿಗಳಿಗೆ ಅನುಕಂಪವಿದ್ದರೆ, ಇತರರಿಗೆ ತಿರಸ್ಕಾರವಿತ್ತು. ಕೊನೆಗೊಂದು ದಿನ ಎಸ್.ಎಸ್.ಎಲ್.ಸಿ. ಮುಗಿಯುವ ದಿನ ಬಂದಿತು. ಅವತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಂದರ್ಭ. ದಿನವಿಡೀ ಹಾಜರಿದ್ದ ಈ ಹುಡುಗ ಗ್ರೂಪ್‌ಫೋಟೋ ಸಮಯಕ್ಕೆ ಸರಿಯಾಗಿ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಮನೆಗೇನಾದರೂ ಹೋಗಿದ್ದಾನೋ ನೋಡ್ರೋ ಎಂದು ಶಿಕ್ಷಕರು ಹುಡುಗರನ್ನು ಕಳಿಸಿಕೊಟ್ಟರು. ಅಲ್ಲಿಂದಲೂ ಇಲ್ಲ ಎಂಬ ಉತ್ತರ ಬಂದಿತು. ಎಲ್ಲಿಗೆ ಹೋದ? ಎಂದು ಎಲ್ಲರೂ ಕೋಪ ಹಾಗೂ ಬೇಸರದಿಂದ ಮಾತನಾಡುತ್ತಿರುವಾಗ ಈ ಹುಡುಗ ತೇಕುತ್ತಾ ಓಡಿ ಬಂದ. ಮುಖ ಬಾಡಿತ್ತು. ಎಲ್ಲರೂ ತನ್ನ ದಾರಿಯನ್ನೇ ಕಾಯುತ್ತಿದ್ದಾರೆ ಎಂಬುದು ಗೊತ್ತಾದಾಗಲಂತೂ ಅವನು ಅಪರಾಧಿ ಭಾವನೆಯಿಂದ ಕುಗ್ಗಿ ಹೋದ.

ರಾಜಶೇಖರ್ ಪಾಟೀಲ್ ಮೊದಲೇ ಮುಂಗೋಪಿ. ಲೇ, ಎಲ್ಲೋಗಿದ್ದೀ? ಎಲ್ಲರೂ ನಿನ್ನ ದಾರಿ ಕಾಯಬೇಕೇನೋ? ಎಂದು ತರಾಟೆಗೆ ತೆಗೆದುಕೊಂಡರು. ಹುಡುಗನಿಗೆ ಏನು ಹೇಳಬೇಕೆಂಬುದೇ ತೋಚಲಿಲ್ಲ. ಸುಮ್ಮನೇ ನಿಂತ. ಇನ್ನಷ್ಟು ದಬಾಯಿಸಿದಾಗ ಸಣ್ಣ ಧ್ವನಿಯಲ್ಲಿ ಹೇಳಿದ. ಬಸ್ ಸ್ಟ್ಯಾಂಡಿಗೆ ಹೋಗಿದ್ದೀನ್ರಿ ಸಾರ್. ನಮ್ಮವ್ವ ಮತ್ತು ತಮ್ಮ ಗುಳೆ ಹೊಂಟಿದ್ರೀ. ಅವ್ರು ಮತ್ತ ಯಾವಾಗ ಬರ್ತಾರೋ ಗೊತ್ತಿಲ್ಲ.... ಅದಕ್ಕ ಲೇಟಾತ್ರೀ....

ರಾಜಶೇಖರ್ ಮಂಕಾದರು. ಹುಡುಗ ಹೇಳಿದ ಕಾರಣ ಅವರ ಸಿಟ್ಟನ್ನು ತಣಿಸಿ ಅಪರಾಧಿ ಭಾವನೆಯನ್ನು ಮೂಡಿಸಿತ್ತು. ಮುಂದೆ ಯಾವತ್ತೂ ಅವರು ಆ ಹುಡುಗನನ್ನು ಬೈಯಲು ಹೋಗಲಿಲ್ಲ.

ಮೇಲಿನ ಘಟನೆಯನ್ನು ವಿವರಿಸಿದ ರಾಜಶೇಖರ, ಅವನ ಮನೆ ಪರಿಸ್ಥಿತಿ ಸರಿ ಇಲ್ರೀ... ಅದಕ್ಕ ಅವ ಆಗಾಗ ಕೂಲಿ ಮಾಡಾಕ ಹೋಗಬೇಕಾಗುತ್ತ. ಇಲ್ಲಾ ಅಂದರೆ ಮನಿ ನಡ್ಯಾಂಗಿಲ್ಲ. ಬಹುಶ: ಟ್ಯೂಶನ್ ತಪ್ಪಿಸಿದ್ದು ಇದೇ ಕಾರಣಕ್ಕೆ ಇರಬೇಕು ಎಂದು ಹೇಳಿದಾಗ ನನ್ನ ಮನಸ್ಸಿನಲ್ಲೂ ಅಪರಾಧಿ ಭಾವನೆ.

ಮುಂದೆ ನಾನು ಮಂಗಳೂರಿನಲ್ಲಿ ಬಡತನದ ಅನೇಕ ಮುಖಗಳನ್ನು ನೋಡಿದೆ. ಪ್ರತಿಭೆಗಳನ್ನು ಅದು ಎಳೆಯ ವಯಸ್ಸಿನಲ್ಲಿಯೇ ಹೇಗೆ ಹೊಸಕಿ ಹಾಕಿ ಬಿಡುತ್ತದೆ ಎಂಬುದನ್ನು ನೋಡಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅವಿವೇಕತನದ ಹೇಳಿಕೆಗಳು, ನಿಜವಾದ ಬರ, ನಿಜವಾದ ಬಡತನ, ನಮ್ಮ ಹಳ್ಳಿಗಳ ದುಃಸ್ಥಿತಿ, ಅದಕ್ಕೆ ಕಾರಣಗಳು, ಸಾಧ್ಯವಿರಬಹುದಾದ ಪರಿಹಾರಗಳು ಎಲ್ಲವೂ ನನಗೆ ಕಂಡು ಬಂದಿದ್ದು ಮಂಗಳೂರಿನ ಆಜ್ಞಾತವಾಸದಲ್ಲಿ!

ಮುಂದೆ ಕೊಪ್ಪಳಕ್ಕೆ ಬಂದೆ. ವಿಜಯ ಕರ್ನಾಟಕ ದಿನಪತ್ರಿಕೆಯ ಜಿಲ್ಲಾ ವರದಿಗಾರನ ಕೆಲಸ ಸಿಕ್ಕಿತು. ಬದುಕು ಮತ್ತೆ ಒಂದು ಸುತ್ತು ಬಂದಿತು. ಆದರೆ ಮಂಗಳೂರಿನ ಕಟು ಅನುಭವಗಳನ್ನು ನಾನು ಮರೆಯಲಿಲ್ಲ. ಗ್ರಾಮೀಣ ಬದುಕಿನ ಸಾವಿರಾರು ಅಂಶಗಳು ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದ್ದವು. ಅವುಗಳ ಬಗ್ಗೆ ಅನೇಕ ವರದಿಗಳನ್ನು ಮಾಡಿದೆ. ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ಸ್ವಲ್ಪ ಬುದ್ಧಿವಂತಿಕೆ ಹಾಗೂ ಸಾಕಷ್ಟು ಪರಿಶ್ರಮ ಇದ್ದರೆ ಹಳ್ಳಿಯ ಬದುಕು ಹೇಗೆ ಬದಲಾಗಬಹುದು ಎಂಬ ಬಗ್ಗೆ ಅನೇಕ ಲೇಖನಗಳು ಬಂದವು.

ಅದು ಬಿಡಿ. ಇವತ್ತಿಗೂ ಬೇಸಿಗೆ ದಿನಗಳಲ್ಲಿ ಊರ ಕಡೆ ಹೋಗಿ ನೋಡಿದರೆ, ಎಲ್ಲ ದಿಕ್ಕಿನಲ್ಲಿ ಗುಳೇ ಹೋಗುವ ಜನರ ಗುಂಪುಗಳೇ ಕಾಣುತ್ತವೆ. ಇನ್ನಾರು ತಿಂಗಳು ಇವರಾರಿಗೂ ಹಬ್ಬವಿಲ್ಲ. ಜಾತ್ರೆಯಿಲ್ಲ. ಊರಿನ ಸುದ್ದಿಯಿಲ್ಲ. ಮತ್ತೊಂದು ಮುಂಗಾರು ಬಂದು, ಮುಗಿಲ ತುಂಬ ಮೋಡಗಳು ತುಂಬಿಕೊಂಡು ಮಳೆಯು ರಭಸವಾಗಿ ಅಪ್ಪಳಿಸಿ ಕಾಯ್ದ ನೆಲವನ್ನು ತಣಿಸುವವರೆಗೆ ಇವರು ವಾಪಸ್ ಬರುವುದಿಲ್ಲ. ದೂರದ ಅಪರಿಚಿತ ಊರುಗಳಲ್ಲಿ ರಸ್ತೆ ಹಾಕುತ್ತಾ, ಕಟ್ಟಡ ಕಟ್ಟುತ್ತಾ, ಅರ್ಧ ಕಟ್ಟಿದ ಕಟ್ಟಡಗಳ ಮೂಲೆಯಲ್ಲಿ ಮೂರು ಕಲ್ಲಿನ ಒಲೆ ಹೂಡಿ, ರೊಟ್ಟಿ ಬೇಯಿಸಿಕೊಂಡು ದಿನಗಳನ್ನು ತಳ್ಳುತ್ತಾರೆ. ಮುಂಚೆ ಅಂದುಕೊಳ್ಳುತ್ತಿದ್ದ, ಬರ ಬರದಿರಲಿ ದೇವರೇ ಎಂಬ ಪ್ರಾರ್ಥನೆಯ ಜೊತೆಗೆ, ಪ್ರವಾಹವೂ ಬಾರದಿರಲಿ ದೇವರೇ ಎಂದು ಬೇಡಿಕೊಳ್ಳುತ್ತಾರೆ. ಊರಲ್ಲಿ ಇದ್ದಿದ್ದರೆ ಇವತ್ತು ಜಾತ್ರೆ ನೋಡಬಹುದಿತ್ತು. ಉಗಾದಿ ಆಚರಿಸಬಹುದಿತ್ತು ಎಂದು ಕನಸು ಕಾಣುತ್ತಾರೆ. ಹಾಗೆ ಕನಸು ಕಾಣುತ್ತಲೇ ಯಾರೋ ಅಪರಿಚಿತನ ಕನಸಿನ ಮನೆ ಕಟ್ಟುತ್ತಾರೆ. ಮುಂದಿನ ಆರು ತಿಂಗಳವರೆಗೆ ಇದೇ ಅವರ ಬದುಕು!

ಗುಳೆ ಹೋದವರನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ? ಎಂದಿನಂತೆ ಊರಿನಲ್ಲಿ ಹಬ್ಬ ಬರುತ್ತದೆ, ಜಾತ್ರೆ ಬರುತ್ತದೆ. ಎಂದಿನಂತೆ ನಾಟಕ ಬಯಲಾಟಗಳು, ಸಭೆ-ಸಮಾರಂಭಗಳು ಬರುತ್ತವೆ. ಬೇರೆ ಊರಿನಲ್ಲಿದ್ದು ನೌಕರಿ ಮಾಡುವ ಜನರೆಲ್ಲಾ ಅವತ್ತು ಊರಿಗೆ ಬರುತ್ತಾರೆ. ಅವರ ಸಂಬಂಧಿಕರು ಬರುತ್ತಾರೆ. ಅಂಗಡಿ ಮುಂಗಟ್ಟುಗಳೆಲ್ಲ ಬರುತ್ತವೆ. ಆದರೆ ಗುಳೆ ಹೋದವರು ಮಾತ್ರ ಬರುವುದಿಲ್ಲ. ಯಾವ ಊರಿನ ಜಾತ್ರೆ ನೋಡಿದರೂ ನನಗೆ ಗುಳೆ ಹೋದ ಬಡವರ ನೆನಪೇ. ದೂರದ ಅಪರಿಚಿತ ಊರುಗಳಲ್ಲಿ ಅವರು ದುಡಿಯುತ್ತಿರುವ ಚಿತ್ರಗಳೇ ಕಣ್ಣ ಮುಂದೆ,

ಚಾಮರಾಜ ಸವಡಿ
ಆಗೆಲ್ಲ ನನಗೆ, ದೇಶ ಪ್ರಗತಿಯತ್ತ ಧಾವಿಸುತ್ತಿದೆ ಎಂದು ಸರಕಾರ ನೀಡುವ ಸುಳ್ಳು ಜಾಹೀರಾತುಗಳು ನೆನಪಾಗುತ್ತವೆ. ಮಾಹಿತಿ ಹಾಗೂ ಸಂಪರ್ಕ ಕ್ರಾಂತಿ ಸಾಧ್ಯವಾಗಿರುವ ಈ ದಿನಗಳಲ್ಲಿ ಕೂಡಾ ಹಳ್ಳಿಯ ಜನರಿಗೆ ಹಳ್ಳಿಯಲ್ಲೇ ಕೆಲಸ ದೊರೆಯುವಂತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ.

ಆದರೆ ಉತ್ತರ ಮಾತ್ರ ಸಿಗುವುದಿಲ್ಲ. ಮನಸ್ಸು ಗುಳೆ ಹೋದವರ ಹಿಂದೆಯೇ ಗುಳೆ ಹೊರಡುತ್ತದೆ. ನರಳುತ್ತದೆ. ನಿಟ್ಟುಸಿರಿಡುತ್ತದೆ.

ಏಕೆಂದರೆ, ನಾನೂ ಕೂಡ ಅವರ ಹಾಗೇ ಗುಳೆ ಬಂದವ! ಇವತ್ತಿಗೂ ವಾಪಸ್ ಊರಿಗೆ ಹೋಗುವ ಕನಸು ಕಾಣುತ್ತಿರುವವ.

(ಅವತ್ತು ಟ್ಯೂಷನ್ ತಪ್ಪಿಸುತ್ತಿದ್ದ ಹುಡುಗ ಈಗ ಹೈಸ್ಕೂಲ್ ಟೀಚರಾಗಿದ್ದಾನೆ. ನೇಮಕಾತಿ ಪತ್ರ ಬಂದಾಗ ಎಲ್ಲೆಲ್ಲೋ ಹುಡುಕಿ ನನ್ನ ನಂಬರ್ ಪತ್ತೆ ಮಾಡಿ ಫೋನ್ ಮಾಡಿ ಸಂತಸ ಹಂಚಿಕೊಂಡಿದ್ದ. ಅವನ ಫೋನ್ ಬಂದ ಆ ದಿನಗಳಲ್ದಾಗಲೇ ನಾನು ಮತ್ತೆ ನಿರುದ್ಯೋಗಿಯಾಗಿದ್ದೆ. ನಾಲ್ವರ ಕುಟುಂಬದ ಜವಾಬ್ದಾರಿಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಆದರೆ, ಅವನ ಫೋನ್ ನನ್ನನ್ನು ಮತ್ತೆ ಬಡಿದೆಬ್ಬಿಸಿತು. ನಾವು ಹಚ್ಚಿದ ದೀಪಗಳು ಎಲ್ಲೋ ಬೆಳಗುತ್ತಿವೆ ಎಂಬ ಖುಷಿ ಹೊಸ ಉತ್ಸಾಹ ತುಂಬಿತ್ತು. ಸಂಪಾದಕೀಯದ ಬರಹ ಮತ್ತೆ ಈ ನೆನಪನ್ನು ಉಕ್ಕಿಸಿದೆ. ಜೊತೆಗೆ ಖುಷಿಯನ್ನೂ... ಥ್ಯಾಂಕ್ಸ್ ಸಂಪಾದಕೀಯವೇ....)

- ಚಾಮರಾಜ ಸವಡಿ
0 komentar

Blog Archive